ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧನಗರ ಗೌಳಿ ಸಮುದಾಯದಿಂದ ತಹಶೀಲ್ದಾರರಿಗೆ ಮನವಿ

ಮುಂಡಗೋಡ,ಜ.29 : ಧನಗರ ಗೌಳಿ ಸಮುದಾಯ ವಿವಿಧ ಬೇಡಿಕೆ ಹಾಗೂ ಸಮಸ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟ ತಾಲೂಕ ಮುಂಡಗೋಡ ಇವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಶು ಪಾಲನಾ ಪಾರಂಪಾರಿಕ ಮೂಲಕಸುಬು ಹೊಂದಿರುವ ಅರೆ-ಅಲೆಮಾರಿ ಧನಗರ ಗೌಳಿ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ತೀರಾ ಹಿಂದುಳಿದಿದೆ ಸ್ವತಂತ್ರ ಭಾರತದಲ್ಲಿ ಇಂದಿಗೂ ಅಸ್ತಿತ್ವದ ಸಮಸ್ಯೆಯಲ್ಲಿ ಸಿಲುಕಿ ತನ್ನ ಸಮುದಾಯದ ಗುರುತನ್ನು ಕಳೆದುಕೊಂಡಿದೆ, ಅಲ್ಲದದೆ ಸರ್ಕಾರದ ಕನಿಷ್ಟ ಮೂಲಭೂತ ಸೌಕರ್ಯಗಳಿಂದ ಕೂಡ ವಂಚಿತವಾಗಿದ್ದು ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯ ಸಿಗದೇ ಅತಂತ್ರ ಸ್ಥಿತಿಯಲಿದೆ.
ಸರ್ಕಾರಿ ಅಧಿಕಾರಿಗಳು ಜಾತಿ ಪ್ರಮಾಣ ಪತ್ರಗಳನ್ನು ನೀಡುವಾಗ ಹಲವಾರು ಗೊಂದಲಗಳು ಸೃಷ್ಠಿಯಾಗುತ್ತಿವೆ ಇದಲ್ಲದೆ ಧನಗರ ಗೌಳಿಗರು ಅನೇಕ ಜ್ವಲಂತ ಸಮಸ್ಯೆಗಳ ಸುಳಿಯೊಳಗೆ ಸಿಲುಕಿ ಬದುಕು ಅಸ್ಥಿರ ಹಾಗೂ ಅತಂತ್ರವಾಗಿದೆ.
ಜ್ವಲಂತ ಸಮಸ್ಯೆಗಳು
ಅಸ್ತಿತ್ವದ ಸಮಸ್ಯ ಹಾಗೂ ಸಮುದಾಯದ ಗುರುತಿಸುವಿಕೆಯ ಸಮಸ್ಯೆ ಸ್ವತಂತ್ರ ಭಾರತದಲ್ಲೂ ಸಂವಿಧಾನಬದ್ದವಾಗಿ ಸರ್ಕಾರದ ವರ್ಗಿಕೃತ ಪಟ್ಟಿಯಲ್ಲಿ ಸ್ಥಾನಮಾನ ಇಲ್ಲದಿರುವುದು ರಾಜ್ಯಾದ್ಯಂತ ಬೇರೆ ಬೇರೆ ಹೆಸರು /ಉಪನಾಮಗಳಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದು. ಇಲ್ಲಿಯವರೆಗೂ ಧನಗರ ಗೌಳಿಗರ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳದೆ ವಾಸ್ತವಾಂಶಗಳನ್ನು ಅರಿಯದಿರುವುದು. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಕಾಗಿರುವ ಎಲ್ಲಾ ಅರ್ಹತೆ ಹಾಗೂ ಬುಡಕಟ್ಟು ಲಕ್ಷಣಗಳಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು. ಪಶುಪಾಲಕ ಅರೆ-ಅಲೆಮಾರಿ ಪಟ್ಟಿ, ಹಿಂದುಳಿದ ವರ್ಗ ಅರೆ-ಅಲೆಮಾರಿ ಪಟ್ಟಿ ಹಾಗೂ ಸರ್ಕಾರದ ಸೂಕ್ಷ್ಮ, ಅತಿ ಸೂಕ್ಷ್ಮ, ಅರೆ ಅಲೆಮಾರಿ ಪಟ್ಟಿಯಲ್ಲಿ ಸ್ಥಾನಮಾನ ಇಲ್ಲದಿರುವುದು. ಧನಗರ ಗೌಳಿಗರ ಪಶುಪಾಲನಾ ಅಭಿವೃದ್ದಿಗಾಗಿ ಅರೆ-ಅಲೆಮಾರಿ ಪಶುಪಾಲಕ ಯೊಜನಯಡಿ ವಿಶೇಷ ಪ್ಯಾಕೇಜಗಳು ಇಲ್ಲದಿರುವುದು. ಅರಣ್ಯ ಹಕ್ಕು ಯೋಜನೆಯಡಿ ಪಶುಪಾಲನಾ ಮೂಲವೃತ್ತಿ ಸಂರಕ್ಷಣೆಗೆ ಹುಲ್ಲುಗಾವಲು ಪ್ರದೇಶ ಸೌಲಭ್ಯ, ಡೈರಿ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಗು ಅಭಿವೃದ್ದಿ ನಿಧಿ ಇಲ್ಲದಿರುವುದು. ಕಂದಾಯ ಗ್ರಾಮ ಸ್ಮಶಾನ ಭೂಮಿ ಹಾಗೂ ಸಕಾರದ ಮೂಲಭೂತ ಕನಿಷ್ಠ ಸೌಲಭ್ಯಗಳು ಇಲ್ಲದಿರುವುದು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜಿಕವಾಗಿ ತೀರಾ ಹಿಂದುಳಿದಿದ್ದು ಸಾಮಾಜಿಕ ಸಮಘಟನೆ ಜಾಗೃತಿ ಇಲ್ಲದಿರುವುದು ರಾಜಕೀಯ ಪ್ರಾತಿನೀಧ್ಯ ಹಾಗೂ ರಾಜಕೀಯ ಮೀಸಲಾತಿ ಇಲ್ಲದಿರುವುದು. ನಿರುದ್ಯೋಗ ಅನಾರೋಗ್ಯ ಆಹಾರದ ಕೊರತೆಯಿಂದ ಬಳಲುತ್ತಿರುವುದು.
ಬೇಡಿಕೆಗಳು
ಧನಗರ ಗೌಳಿ ಅಸ್ತಿತ್ವವನ್ನು ಗುರುತಿಸುವಂತೆ ಮಾಡುವುದು, ಧನಗರಗೌಳಿ ಎಂದು ಜಾತಿ ಪ್ರಮಾಣ ನೀಡುವುದು, ವರ್ಗಿಕೃತ ಪಟ್ಟಿಯಲ್ಲಿ ಸ್ಥಾನಮಾನ ನೀಡುವುದು, ಪರಿಶಿಷ್ಠ ಪಂಗಡಕ್ಕೆ ಸೇರಿಸುವುದು, ಸರ್ಕಾರದ ಅಲೆಮಾರಿ ಪಟ್ಟಿಯಲ್ಲಿ ಸ್ಥಾನಮಾನ ನೀಡುವುದು, ಅರೆ-ಅಲೆಮಾರಿ ಪಶುಪಾಲಕ ಯೋಜನೆಯಡಿ ವಿಶೇಷ ಪ್ಯಾಕೇಜ್ ಘೋಷಿಸುವುದು, ವಾಸಿಸುವನೇ ಮನೆಯೊಡೆಯ ಯೋಜನೆಯಡಿ ಏಳು ಜಿಲ್ಲೆಗಳ ಗೌಳಿದೊಡ್ಡಿವಾಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು, ವಾಸವಾಗಿರುವ ಭೂಮಿಯನ್ನು ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರಗಳನ್ನು ನೀಡುವುದು, ಅರಣ್ಯ ಮತ್ತು ಪಶುಪಾಲನಾ ಇಲಾಖೆಗಳಲ್ಲಿ ಧನಗರ ಗೌಳಿಗರಿಗೆ ಶೇ.25 ಉದ್ಯೋಗ ಮಿಸಲಾತಿ, ಧನಗರ ಗೌಳಿಗರು ವಾಸವಾಗಿರುವ ಆಯಾ ತಾಲೂಕಿನ ಗೌಳಿಗರ ಜನಸಂಖ್ಯಾನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಹಾಗೂ ರಾಜಕೀಯ ಮೀಸಲಾತಿ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಎಪಿಎಮ್‍ಸಿ ಅಧ್ಯಕ್ಷ ದೇವು ಪಾಟೀಲ, ಧಗೌವಿಸಸಂ ಅಧ್ಯಕ್ಷ ಗಂಗು ಕೊಕರೆ, ಉಜಜಿಸ ಅಧ್ಯಕ್ಷ ಯಮ್ಮು ವರಕ, ಕ.ರಾ.ಧ.ಗೌ.ಯು ಒಕ್ಕೂಟ ಅಧ್ಯಕ್ಷ ಸಿದ್ದು ಧೋರತ್, ಮುಂಡಗೋಡ ತಾಲೂಕ ಅಧ್ಯಕ್ಷರ ದುಂಡು ಕೊಕರೆ ಸೇರಿದಂತೆ ಮುಂತಾದ ಧನಗರಗೌಳಿ ಸಮಾಜದವರು ಉಪಸ್ಥಿತರಿದ್ದರು.







