ರಾಷ್ಟ್ರಪತಿ ಭಾಷಣಕ್ಕೆ ‘ಆಪ್’ ಸಂಸದರ ಬಹಿಷ್ಕಾರ

ಹೊಸದಿಲ್ಲಿ, ಜ.29: ಸೋಮವಾರ ಆರಂಭಗೊಂಡ ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣವನ್ನು ‘ಆಮ್ ಆದ್ಮಿ ಪಕ್ಷ (ಆಪ್)’ ದ ಸಂಸದರು ಬಹಿಷ್ಕರಿಸಿದ್ದಾರೆ.
ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಿದ್ದಕ್ಕೆ ಪ್ರತಿಭಟನೆ ಸೂಚಿಸುವ ನಿಟ್ಟಿನಲ್ಲಿ ಸಂಸದರು ಈ ಕ್ರಮ ಕೈಗೊಂಡಿದ್ದಾರೆ. ಬಳಿಕ ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಘೋಷಣೆ ಕೂಗಿದ ಸಂಸದರು, ಆಪ್ ಶಾಸಕರ ಶಾಸಕತ್ವವನ್ನು ಹೈಕೋರ್ಟ್ ರದ್ದುಗೊಳಿಸಿಲ್ಲ. ಅವರನ್ನು ಸಂಸದೀಯ ಕಾರ್ಯದರ್ಶಿಗಳೆಂದು ನೇಮಿಸಿರುವುದನ್ನು ರದ್ದುಗೊಳಿಸಿದೆ ಅಷ್ಟೇ. ದೇಶದಲ್ಲಿ ಎರಡು ಬಗೆಯ ಕಾನೂನು ಇರಲು ಸಾಧ್ಯವಿಲ್ಲ . ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅವಕಾಶ ನೀಡಲಾಗದು ಎಂದು ಹೇಳಿದರು.
ಅಲ್ಲದೆ ದಿಲ್ಲಿಯ ಮಹಾನಗರಪಾಲಿಕೆ ನಡೆಸುತ್ತಿರುವ ಅನಧಿಕೃತ ಅಂಗಡಿಗಳ ಮುಟ್ಟುಗೋಲು ಕಾರ್ಯಾಚರಣೆ, ಚಿಲ್ಲರೆ ಮಾರುಕಟ್ಟೆಯಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯನ್ನೂ ವಿರೋಧಿಸಿ ಆಪ್ ಸಂಸದರು ಘೋಷಣೆ ಕೂಗಿದರು. ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮೂವರು ‘ಆಪ್’ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದರು.