ಜಗದೀಶ್ ಶೇಣವ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ : ಹನೀಫ್ ಖಾನ್ ಕೊಡಾಜೆ ಒತ್ತಾಯ

ಬಂಟ್ವಾಳ, ಜ. 28: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಅಮಾಯಕ ಬಶೀರ್ ಹತ್ಯೆಯನ್ನು ಬಹಿರಂಗವಾಗಿ ಸಮರ್ಥನೆ ಮಾಡಿ ಅಮಾನವೀಯತೆ ಮೆರೆದಿರುವ ವಿಶ್ವ ಹಿಂದೂ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅವರು ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಯಾದ ಬಶೀರ್ ಅವರ ಹತ್ಯೆಗೆ "ಪ್ರತೀಕಾರದ ಕೊಲೆ, ಇದರಲ್ಲಿ ನಮಗೇನು ಚಿಂತೆಯಿಲ್ಲ, ಕೊಲೆ ಮಾಡಿದವರನ್ನು ನಾವು ಬೆಂಬಲಿಸಬೇಕು. ಈ ಬಗ್ಗೆ ನನ್ನ ಮೇಲೆ ದೂರು ದಾಖಲಾದರು ಅದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುವುದಿಲ್ಲ'' ಎಂದು ಹೇಳಿಕೆ ಕೊಟ್ಟಿದ್ದು, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ.
ಅಲ್ಲದೆ ಜಗದೀಶ ಶೇಣವರ ಈ ಹೇಳಿಕೆಯನ್ನು ಗಮನಿಸಿದರೆ ಪ್ರತೀಕಾರಕ್ಕಾಗಿ ಬಶೀರ್ ಅವರ ಹತ್ಯೆಯನ್ನು ಖುದ್ದಾಗಿ ಮಾಡಿಸಿರುವುದಾಗಿ ಮೇಲ್ನೋಟಕ್ಕೆ ಸಾಬೀತುಗೊಳ್ಳುವುದರಿಂದ ಬಶೀರ್ ಕೊಲೆ ಪ್ರಕರಣದಲ್ಲಿ ಜಗದೀಶ್ ಶೇಣವರನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೀಪಕ್, ಬಶೀರ್ ಇಬ್ಬರ ಹತ್ಯೆ ಸಂದರ್ಭದಲ್ಲೂ ಇದರ ಹಿಂದೆ ದೊಡ್ಡ ಮಟ್ಟದ ಕಾಣದ ಕೈಗಳಿವೆ ಎಂದು ಎಸ್‍ಡಿಪಿಐ ಆರೋಪಿಸಿತ್ತು. ಅದನ್ನು ಇಂದು ಜಗದೀಶ್ ಶೇಣವ ಸಾಬೀತುಪಡಿಸಿದ್ದಾರೆ. ಇಂತಹ ಹೇಳಿಕೆ ಜಿಲ್ಲೆಯ ಶಾಂತಿಯನ್ನು ಕೆಡವಿ ಗಲಭೆಯನ್ನು ಸೃಷ್ಟಿಸುವ ಹುನ್ನಾರವಾಗಿದೆ. ಪದೇ ಪದೇ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಜಗದೀಶ್ ಶೇಣವ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಹನೀಫ್ ಖಾನ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







