ಗುರುವಾಯನಕೆರೆ : ಬೃಹತ್ ಉಚಿತ ವೈದ್ಯಕೀಯ ಶಿಬಿರ

ಬೆಳ್ತಂಗಡಿ,ಜ.29: ನಾಗರಿಕ ಸೇವಾ ಟ್ರಸ್ಟ್ ಮತ್ತು ಇದರ ಜನಸಂಘಟನೆಗಳ ಆಶ್ರಯದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಭವನದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ವತಿಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ರವಿವಾರ ನಡೆಯಿತು.
ಕುವೆಟ್ಟು ಗ್ರಾಮ ಪಂಚಾಯತ್‍ನ ಅಧ್ಯಕ್ಷ ಅಶೋಕ ಕೋಟ್ಯಾನ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಮಾತನಾಡಿ, 1989ರಿಂದ ಕೆ.ಎಂ.ಸಿ ಸಹಭಾಗಿತ್ವದಲ್ಲಿ 800ಕ್ಕೂ ಹೆಚ್ಚು ವೈದ್ಯಕೀಯ-ನೇತ್ರ-ದಂತ ಚಿಕಿತ್ಸಾ ಶಿಬಿರ ನಡೆಸಿದ್ದೇವೆ. ಲಕ್ಷಾಂತರ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದು ಕೆ.ಎಂ.ಸಿ ಗೆ ಅಭಿನಂದನೆ ಸಲ್ಲಿಸಿದರು.
ಕೆ.ಎಂ.ಸಿ.ಯ ಮೆಡಿಕಲ್ ಸೋಶಿಯಲ್ ವರ್ಕರ್ ಅಲ್ಬರ್ಟ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಪರೀಕ್ಷೆ ಮಾಡಿ ಕಾರ್ಡ್ ನೀಡಿದವರಿಗೆ ಶಸ್ತ್ರಚಿಕಿತ್ಸೆಗೆ 10,000 ರೂ. ವರೆಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಿಯಾಯ್ತಿ ಇದೆ ಎಂದು ವಿವರ ನೀಡಿದರು.
ಶಿಬಿರದಲ್ಲಿ 11 ಮಂದಿ ತಮ್ಮ ಮರಣಾನಂತರ ನೇತ್ರದಾನ ಮಾಡಲು ನೋಂದಣಿ ಮಾಡಿದರು. ವಿದ್ಯಾ ನಾಯಕ್ ಮತ್ತು ಕೆ.ಸೋಮನಾಥ ನಾಯಕ್ ತಮ್ಮ ಮರಣಾನಂತರ ದೇಹವನ್ನು ಆಸ್ಪತ್ರೆಗೆ ದಾನ ಮಾಡುವುದಾಗಿ ಸಭೆಯಲ್ಲಿ ಪ್ರಕಟಿಸಿದರು. ಶಿಬಿರದಲ್ಲಿ 202 ಮಂದಿ ಪ್ರಯೋಜನ ಪಡೆದರು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್ ಸ್ವಾಗತಿಸಿ, ಕೃಷಿಕರ ವೇದಿಕೆಯ ಕಾರ್ಯದರ್ಶಿ ಕೆ.ಸದಾಶಿವ ಹೆಗ್ಡೆ ವಂದಿಸಿದರು. ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ನಿರೂಪಿಸಿದರು. ವೇದಿಕೆಯಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಡಾ.ಅಕ್ಷತ್ ಆಚಾರ್ಯ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಮುಮ್ತಾಝ್ ಉಪಸ್ಥಿತರಿದ್ದರು.







