ಪೆರ್ಡೂರು ಬಳಿ ಬಾವಿಗೆ ಬಿದ್ದು ಚಿರತೆ ಸಾವು

ಉಡುಪಿ, ಜ.29: ಪೆರ್ಡೂರು ಗ್ರಾಮದ ಶಿರೂರು ಸಮೀಪದ ಸುತ್ತುಬಲ್ಲೆ ಎಂಬಲ್ಲಿ ಚಿರತೆಯೊಂದು ಆವರಣ ಇಲ್ಲದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ಎರಡು ದಿನಗಳ ಹಿಂದೆ ಬೇಟೆಯನ್ನು ಬೆನ್ನಟ್ಟಿಕೊಂಡು ಬಂದ ಚಿರತೆ ಸ್ಥಳೀಯರಾದ ಸತೀಶ್ ಕುಲಾಲ್ ಎಂಬವರ ಜಾಗದಲ್ಲಿರುವ ಆವರಣ ಇಲ್ಲದ ಬಾವಿಗೆ ಬಿತ್ತೆನ್ನಲಾಗಿದೆ. ಆ ಜಾಗದ ಸುತ್ತ ಯಾವುದೇ ಮನೆ ಇಲ್ಲದ ಕಾರಣ ಈ ವಿಚಾರ ಯಾರ ಗಮನಕ್ಕೂ ಬಂದಿರಲಿಲ್ಲ. ಎರಡು ದಿನಗಳ ಹಿಂದೆ ನೀರಿಗೆ ಬಿದ್ದಿದ್ದು ನಿನ್ನೆ ನೀರಿನಲ್ಲಿ ಮುಳುಗಿ ಮೃಪಟ್ಟಿರಬಹುದೆಂದು ಶಂಕಿಸಲಾಗಿದೆ.
ಇಂದು ಮಧ್ಯಾಹ್ನ ವೇಳೆ ಸ್ಥಳೀಯರೊಬ್ಬರು ಬಾವಿಯಲ್ಲಿ ಚಿರತೆ ಸತ್ತು ಬಿದ್ದಿ ರುವುದನ್ನು ನೋಡಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಮೇಲಕ್ಕೆತ್ತಿ ಸಂಜೆ ವೇಳೆ ಅಲ್ಲೇ ಸಮೀಪದ ಹಾಡಿಯಲ್ಲಿ ಧಪನ ಮಾಡಿದರು.
ಇದು ಎರಡು ವರ್ಷದ ಗಂಡು ಚಿರತೆಯಾಗಿದ್ದು, ಈಜಿ ಸುಸ್ತಾದ ಚಿರತೆ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು. ಹಿರಿಯಡ್ಕದ ಪಶು ವೈದ್ಯಾಧಿಕಾರಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು ಎಂದು ಪೆರ್ಡೂರು ಉಪ ವಲಯ ಅರಣ್ಯಾಧಿಕಾರಿ ಕರುಣಾಕರ್ ಪತ್ರಿಕೆಗೆ ತಿಳಿಸಿದ್ದಾರೆ.
ಮೂಡಬಿದ್ರೆ ಉಪ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಎಚ್.ಆರ್., ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಸ್ಥಳದಲ್ಲಿ ಹಾಜರಿದ್ದರು.







