ಆಧಾರ್‌ನಿಂದ 57 ಸಾವಿರ ಕೋಟಿ ರೂ. ಉಳಿಕೆ : ರಾಮ್ ನಾಥ್ ಕೋವಿಂದ್
ಕೇಂದ್ರ ಸರಕಾರವನ್ನು ಹಾಡಿ ಹೊಗಳಿದ ರಾಷ್ಟ್ರಪತಿ

ಹೊಸದಿಲ್ಲಿ, ಜ.29: ಮಧ್ಯವರ್ತಿಗಳನ್ನು ನಿವಾರಿಸಿ 57,000 ಕೋಟಿ ರೂ.ಗಳನ್ನು ಉಳಿಸಲು ಸರಕಾರಕ್ಕೆ ಆಧಾರ್ ನೆರವಾಗಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.
ಮಧ್ಯವರ್ತಿಗಳನ್ನು ನಿವಾರಿಸಿ ಬಡಜನರ ಹಕ್ಕುಗಳನ್ನು ರಕ್ಷಿಸಲು ಆಧಾರ್ ನೆರವಾಗಿದೆ. ಈಗಿನ ಸಂದರ್ಭದಲ್ಲಿ ಸರಕಾರದ 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಡಿಜಿಟಲ್ ಪಾವತಿ ಸಾಧ್ಯವಾಗಿದೆ ಎಂದು ಸಂಸದ್‌ನ ಉಭಯ ಸದನಗಳನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ರಾಷ್ಟ್ರಪತಿ ತಿಳಿಸಿದರು.
ದೇಶದಾದ್ಯಂತ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಸರಕಾರ ‘ಭೀಮ್’ ಆ್ಯಪ್ ಬಿಡುಗಡೆಗೊಳಿಸಿದೆ. ‘ಭೀಮ್’ ಆ್ಯಪ್ ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಇತ್ತೀಚೆಗೆ ಅನುಷ್ಠಾನಗೊಳಿಸಿದ ‘ಉಮಂಗ್ ಆ್ಯಪ್’ ಮೂಲಕ 100ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳನ್ನು ಮೊಬೈಲ್ ಫೋನ್‌ನಲ್ಲಿ ಪಡೆಯಬಹುದಾಗಿದೆ ಎಂದು ರಾಷ್ಟ್ರಪತಿ ತಿಳಿಸಿದರು.
2014ರ ವೇಳೆ ಭಾರತದಲ್ಲಿ ಕೇವಲ 2 ಮೊಬೈಲ್ ಫೋನ್ ತಯಾರಿಸುವ ಸಂಸ್ಥೆಗಳಿದ್ದವು. ಈಗ 113ಕ್ಕೂ ಹೆಚ್ಚು ಮೊಬೈಲ್ ತಯಾರಿಕಾ ಸಂಸ್ಥೆಗಳು ಭಾರತದಲ್ಲಿವೆ. ಇದರಿಂದ ದೇಶದಾದ್ಯಂತದ ಯುವಜನತೆಗೆ ಅಧಿಕ ಉದ್ಯೋಗಾವಕಾಶ ಲಭ್ಯವಾಗಿದೆ ಎಂದರು. ಪ್ರಧಾನಿಯವರ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಶ್ಲಾಘಿಸಿದ ಕೋವಿಂದ್, ಕೇಂದ್ರ ಸರಕಾರ ವಿಶ್ವದ ಬೃಹತ್ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸಿದೆ . ಈ ಮೂಲಕ 1 ಕೋಟಿಗೂ ಹೆಚ್ಚು ಮಂದಿಯನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲಾಗಿದೆ ಎಂದರು.