60 ವರ್ಷಗಳ ನಂತರ ರೈತರಿಗೆ ಸಾಗುವಳಿ ಪತ್ರ : ವೈ.ಎಸ್.ವಿ. ದತ್ತ

ಕಡೂರು, ಜ.29: ತಾಲೂಕಿನ ಎಮ್ಮೆದೊಡ್ಡಿ ಭಾಗದ ಸ.ನಂ. 70 ರಲ್ಲಿ ರೈತರು ಜಮೀನು ಉಳುಮೆ ಮಾಡುತ್ತಿದ್ದು, ಇವರಿಗೆ ಕಳೆದ 60 ವರ್ಷಗಳಿಂದ ಯಾವುದೇ ಸಾಗುವಳಿ ಪತ್ರ ದೊರಕಿರುವುದಿಲ್ಲ. ಹಲವಾರು ಹೋರಾಟಗಳ ಮಧ್ಯೆ ಈ ಭಾಗದ ಸುಮಾರು 55 ಜನ ರೈತರಿಗೆ ಸಾಗುವಳಿ ಪತ್ರ ದೊರಕಿಸಲಾಗಿದೆ. ಇನ್ನೂ 500 ಜನರಿಗೆ ಸಾಗುವಳಿಗೆ ಚೀಟಿ ಕೊಡಿಸಲು ಗುರಿ ಹೊಂದಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಅವರು ಎಮ್ಮೆದೊಡ್ಡಿ ಗ್ರಾಮದ ಸಗುನಿಬಸವನಹಳ್ಳಿ ಗ್ರಾಮದಲ್ಲಿ ಆ ಭಾಗದ ಸುಮಾರು 55 ಜನರಿಗೆ ಸಾಗುವಳಿ ಪತ್ರವನ್ನು ವಿತರಿಸಿ ಮಾತನಾಡಿದರು. ಈ ಭಾಗದ ರೈತರಿಗೆ ಯಾವುದೇ ಸಾಗುವಳಿ ಚೀಟಿ ದೊರಕಿಸಲು ಸಾಧ್ಯವಾಗಿರಲಿಲ್ಲ. ಸ.ನಂ. 70 ರ ಜಮೀನುಗಳಿಗೆ ಸಾಗುವಳಿ ಚೀಟಿ ದೊರಕಿಸಲು ಕಠಿಣವಾಗಿತ್ತು. ಈ ಜಮೀನಿನ ಬಗ್ಗೆ ಹೈಕೋರ್ಟ್‍ನಲ್ಲಿ ಕೇಸು ದಾಖಲಿಸಲಾಗಿತ್ತು. ಇದರಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಶ್ರಮವಿದೆ ಎಂದು ಹೇಳಿದರು.
ಸಾಗುವಳಿ ಪತ್ರ ದೊರಕಿಸುವಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀರಂಗ ಹಾಗೂ ತಹಸೀಲ್ದಾರ್ ಭಾಗ್ಯ ಇವರ ಕೊಡುಗೆ ಅಪಾರವಾಗಿದೆ. ಯಾವುದೇ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಸಾಗುವಳಿದಾರರಿಂದ ಯಾವುದೇ ಹಣ ಪಡೆದಿಲ್ಲ. ರೈತರ ಪರ ಹೋರಾಟವನ್ನು ಮಾಡಿ ಸಾಗುವಳಿ ಪತ್ರ ದೊರಕಿಸಿಕೊಡಲಾಗಿದೆ. ಸಾಗುವಳಿ ಪತ್ರ ದೊರಕಿಸಿಕೊಡಬಾರದು ಎಂಬ ಉದ್ದೇಶದಿಂದ ಪಟ್ಟಬದ್ಧ ಹಿತಾಸಕ್ತಿಗಳು ಇದರ ಬಗ್ಗೆ ಕೇಸು ಹಾಕಲಾಗಿತ್ತು. ಕಡು ಬಡವರಿಗೆ ಬೆಳಕು ನೀಡಿದ ಸಮಾಧಾನ ಇದೆ ಎಂದು ಹೇಳಿದರು.
ಈ ಸಾಗುವಳಿ ಪತ್ರದ ವಿಷಯದಲ್ಲಿ ಸುಮಾರು 577 ಜನರ ಮೇಲೆ ಕೇಸು ಹಾಕಿಸಲಾಗಿತ್ತು. ಹಲವಾರು ಕೇಸುಗಳಲ್ಲಿ ಗೆದ್ದು ನಂತರ ಸಾಗುವಳಿ ಚೀಟಿ ದೊರಕಿಸಲಾಗಿದೆ. ಜನರು ನೀಡಿದ ಶಕ್ತಿಯ ಫಲವಾಗಿ ಕೆಲಸ ಮಾಡಲಾಗಿದೆ. ಸಾಗುವಳಿ ಚೀಟಿ ಸಿಗದಂತೆ ನೋಡಿಕೊಂಡ ಜನರಿಗೆ ಇದು ತಕ್ಕ ಪಾಠವಾಗಲಿದೆ. ಇದರ ಬಗ್ಗೆ ಭಾರೀ ಪ್ರಯತ್ನಗಳು ನಡೆದವು. ಬಡವರ ಬಗ್ಗೆ ಕೀಳು ರಾಜಕಾರಣ ಮಾಡದೆ ರಾಜಮಾರ್ಗದಲ್ಲಿ ರಾಜಕಾರಣ ಮಾಡಬೇಕಿದೆ ಎಂದು ಹೇಳಿದರು.
ನಾನು ಶಾಸಕನಾಗಿದ್ದು ಯಾವುದೇ ಆಸ್ತಿ, ಮನೆ ಮಾಡಿಕೊಳ್ಳಲು ಅಲ್ಲ, ಬಡವರ ಕೆಲಸ ಮಾಡಲು ಮಾತ್ರ. ಈ ಭಾಗದ ವಿದ್ಯುತ್ ಸಮಸ್ಯೆ ನಿವಾರಣೆಗೆ 108 ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿ ಸಂಪೂರ್ಣಗೊಂಡಿದೆ. ಈಗ ನಿರಂತರ ವಿದ್ಯುತ್ ದೊರಕುತ್ತಿದೆ. ಬುಕ್ಕಸಾಗರ ಬಳಿ ಸರ್ವೀಸ್ ಲೈನ್ ಮಂಜೂರಾಗಿದೆ. ಗೋಂದಿ ಅಣೆಕಟ್ಟಿನ ಯೋಜನೆ ಆದರೆ ಮದಗದ ಕೆರೆ ತುಂಬಿಸುವ ಕನಸು ನನ್ನದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಭಾಗ್ಯ, ಶಿವಮೂರ್ತಿನಾಯ್ಕ, ತಿಪ್ಪೇಸ್ವಾಮಿ, ಪ್ರಸನ್ನ, ಭಂಡಾರಿ ಶ್ರೀನಿವಾಸ್, ಸೀಗೆಹಡ್ಲು ಹರೀಶ್, ಕೃಷ್ಣಾನಾಯ್ಕ, ಕೃಷ್ಣಮೂರ್ತಿ, ತಮ್ಮಯ್ಯ, ಕಲ್ಲೇಶಪ್ಪ, ಚಂದ್ರಶೇಖರ್, ಶ್ರೀಮತಿ ಪುಷ್ಪ, ತಿಮ್ಮಪ್ಪ ಉಪಸ್ಥಿತರಿದ್ದರು







