ಸುನಂದಾ ಪುಷ್ಕರ್ ಪ್ರಕರಣ: ಸುಬ್ರಮಣಿಯನ್ ಸ್ವಾಮಿ ಮನವಿ ಸ್ವೀಕಾರಕ್ಕೆ ಸುಪ್ರೀಂ ಆಕ್ಷೇಪ

ಹೊಸದಿಲ್ಲಿ, ಜ. 29: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಸಿಟ್ ತನಿಖೆ ಕೋರಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಮನವಿಗೆ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.
2017 ಜನವರಿ 14ರಂದು ರಾತ್ರಿ ಹೊಸದಿಲ್ಲಿಯ ಪಂಚತಾರ ಹೋಟೆಲೊಂದರ ಸೂಟ್‌ನಲ್ಲಿ ಸುನಂದಾ ಪುಷ್ಕರ್ ಅವರು ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪುಷ್ಕರ್ ಸಾವಿನ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸುವಂತೆ ಕೋರಿ ಸುಬ್ರಮಣಿಯನ್ ಸ್ವಾಮಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.
ಇಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಅಮಿತಾವ್ ರಾಯ್ ಅವರನ್ನೊಳಗೊಂಡ ಪೀಠ, ಮನವಿಯನ್ನು ಸ್ವೀಕರಿಸುವ ಬಗ್ಗೆ ಮೊದಲು ನ್ಯಾಯಾಲಯವನ್ನು ಮನದಟ್ಟು ಮಾಡಿ ಎಂದು ಸ್ವಾಮಿಗೆ ತಿಳಿಸಿತು.
ಅರ್ಹತೆಗೆ ಹೋಗುವ ಮೊದಲು ಮನವಿಯ ಸ್ವೀಕಾರದ ಬಗ್ಗೆ ನಮಗೆ ಮನದಟ್ಟಾಗುವ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.