ಸಂಘ ಪರಿವಾರದ ವಿರುದ್ಧ ಗೌರಿ ಪರಿವಾರ: ಕನ್ಹಯ್ಯ ಕುಮಾರ್
ಬೆಂಗಳೂರಿನಲ್ಲಿ ‘ಗೌರಿ ದಿನ’

ಬೆಂಗಳೂರು, ಜ.29: ನಾವು ಎಂದಿಗೂ ಭಾರತವನ್ನು ತುಂಡು ಮಾಡುತ್ತೇವೆ ಎಂದಿಲ್ಲ. ಸಂಘ ಪರಿವಾರದ ವಿರುದ್ಧ ಗೌರಿ ಪರಿವಾರವಿದೆ. ಗೌರಿ ಪರಿವಾರದಿಂದಲೇ ಸಂಘಪರಿವಾರವನ್ನು ತುಂಡು ತುಂಡಾಗಿ ಮಾಡುತ್ತೇವೆ ಎಂದು ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಹೇಳಿದರು.
ಸೋಮವಾರ ನಗರದ ಪುರಭವನದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಗೌರಿ ದಿನ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಸತ್ಯ ಮಾತನಾಡಿದರೆ, ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ. ಆದರೆ, ಇದಕ್ಕೆ ನಾವು ತಲೆಬಾಗಿ ನಡೆಯುವುದಿಲ್ಲ. ಬದಲಾಗಿ ಸಂವಿಧಾನ, ನಮ್ಮ ಹಕ್ಕುಗಳನ್ನು ಉಳಿಸಲು ಚಳವಳಿ ಸಕ್ರಿಯವಾಗಲಿದೆ ಎಂದರು.
ಗೌರಿ ನನ್ನ ತಾಯಿಯಾಗಿದ್ದರು. ಆದರೆ, ನಮ್ಮ ದೇಶದಲ್ಲಿ 'ಅಮ್ಮ' ಎನ್ನುವ ಕಾರ್ಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಾತ್ರ ಬಳಸಿಕೊಂಡು, ನೋಟು ಅಮಾನ್ಯೀಕರಣಗೊಂಡಾಗ ತಾಯಿಯನ್ನು ಎಟಿಎಂ ಮುಂದೆ ನಿಲ್ಲಿಸಿದ್ದರು. ಆದರೆ, ಶೋಷಣೆಗೆ ಒಳಪಡುವ ಯುವಕರ ಪೋಷಕರ ಬಗ್ಗೆ ಮೋದಿ ಯೋಚನೆ ಮಾಡಿದ್ದಾರೆಯೇ ಎಂದು ಕನ್ಹಯ್ಯಾ ಪ್ರಶ್ನಿಸಿದರು.
ಹಿಂದೂ ಧರ್ಮದ ಪ್ರಕಾರ ಒಂದು ಊರಿನಲ್ಲಿ ಹೆಣ ಬಿದ್ದರೆ ಇಡೀ ಊರು ಊಟ ಮಾಡುವುದಿಲ್ಲ. ಆದರೆ, ಇಂದು ಹೆಣದ ಮೇಲೆ ಟ್ವೀಟ್ ಮಾಡುವುದಲ್ಲದೆ, ಟೀಕೆಗಳನ್ನು ಮಾಡಲಾಗುತ್ತಿದೆ. ಇನ್ನು ನರೇಂದ್ರ ಮೋದಿ ಯಾವ ನೈತಿಕತೆ ಬಗ್ಗೆ ನಮಗೆ ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧ ಮಾಡುವ ಸಮಯ ನಮಗಿಲ್ಲ. ಅವರ ವಿಚಾರಕ್ಕಿಂತ ಕೋಮುವಾದ ಹರಡಲು ನಾವು ಬಿಡುವುದಿಲ್ಲ. ಕೋಮುವಾದಿಗಳು ದೇಶದಲ್ಲಿರುವ ಎಲ್ಲ ಮುಸ್ಲಿಮರನ್ನು ಕೊಂದು ಬಿಡಿ ಎಂದು ಹೇಳಿಕೆ ನೀಡುತ್ತಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.







