ಅಭಿಮಾನಿಯ ಹುಚ್ಚಾಟಕ್ಕೆ ಕಂಗಾಳಾದ ಸಮಾಜ ಸೇವಕ
ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿ ಆತ್ಮ ಹತ್ಯೆಗೆ ಯತ್ನ

ಮಂಡ್ಯ, ಜ.29: ಮೈಸೂರು ಲಾರಿ ಮಾಲಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿ ಅಭಿಮಾನಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಸೋಮವಾರ ಪಾಂಡವಪುರದಲ್ಲಿ ನಡೆದಿದೆ.
ಸಮಾಜಸೇವಕ ಬಿ.ರೇವಣ್ಣ ಅವರು ಪಟ್ಟಣದ ಮಹಾತ್ಮಗಾಂಧಿ ನಗರದಲ್ಲಿ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿ ಬರುವಂತಹ ಸಂದರ್ಭದಲ್ಲಿ ಅಭಿಮಾನಿಗಳು ಅವರನ್ನು ಅಡ್ಡಗಟ್ಟಿ ಮುಂದಿನ ಚುನಾವಣೆಯಲ್ಲಿ ಸ್ಫರ್ದಿಸುವಂತೆ ಮನವಿ ಮಾಡಿ, ಒಂದು ವೇಳೆ ನೀವು ಸ್ಪರ್ಧಿಸದೆ ಹೋದರೆ ವಿಷ ಸೇವಿಸುವುದಾಗಿ ಅಭಿಮಾನಿ ಯಶ್ವಂತ್ ಎಂಬ ಯುವಕ ರೇವಣ್ಣ ಎದುರು ವಿಷ ಕುಡಿಯಲು ಮುಂದಾದರು. ತಕ್ಷಣ ಅಭಿಮಾನಿಗಳು, ಕಾರ್ಯಕರ್ತರು ವಿಷ ಕುಡಿಯುಲು ಮುಂದಾದ ಯುವಕನ್ನು ತಡೆದು ಸಮಾಧಾನ ಪಡಿಸಿದರು.
ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಸಮಾಜಸೇವೆ ಮಾಡುತ್ತಿರುವ ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ರೇವಣ್ಣ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿ.ರೇವಣ್ಣ, 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಆದರೆ ಸಮಾಜ ಸೇವೆಯಲ್ಲಿಯೇ ಮುಂದುವರೆಯುತ್ತೇನೆ' ಎಂದು ಘೋಷಣೆ ಮಾಡಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಬಿ.ರೇವಣ್ಣ ಅಭಿಮಾನಿಗಳು ಯಾವುದೇ ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ. ನೀವು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಂತರ ಮಾತನಾಡಿದ ಬಿ.ರೇವಣ್ಣ, ಅಭಿಮಾನಿಗಳು ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಮುಂದಾಗಬಾರದು. ಚುನಾವಣೆಯಲ್ಲಿ ಸ್ಪರ್ಧಿಸೋದು ಬಿಡೋದು ಬೇರೆ. ಚುನಾವಣೆಗೆ ನಿಲ್ಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳ ವಿಷ ಸೇವನೆ ಮಾಡುವಂತಹ ನಿರ್ಧಾರಕ್ಕೆ ಮುಂದಾಗುವುದು ಒಳ್ಳೆಯ ನಿರ್ಧಾರವಲ್ಲ. ದಯಮಾಡಿ ಅಭಿಮಾನಿಗಳು ಇಂತಹ ಕೃತ್ಯಕ್ಕೆ ಮುಂದಾಗಬಾರದು. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಚುನಾವಣೆಗೆ ಸ್ಪರ್ಧಿಸದಿದ್ದರೂ ಸಮಾಜಸೇವೆ ಮಾಡುವ ಮೂಲಕ ನಿಮ್ಮೊಂದಿಗೆ ಇರುತ್ತೇನೆ. ಜತೆಗೆ ಚುನಾವಣೆಗೆ ಸ್ಪರ್ಧೆಮಾಡುವ ಬಗ್ಗೆ ನನ್ನ ಮೇಲಿನ ನಾಯಕರೊಂದಿಗೆ ಚರ್ಚಿಸಿ ಮತ್ತೊಮ್ಮೆ ನಿರ್ಧರಿಸುತ್ತೇನೆ. ಹಾಗಾಗಿ ಅಭಿಮಾನಿಗಳು, ಕಾರ್ಯಕರ್ತರು ಇಂತಹ ಕೃತ್ಯಕ್ಕೆ ಮುಂದಾಗಬಾದರು ಎಂದು ಅಭಿಮಾನಿಗಳಲ್ಲಿ ಬಿ.ರೇವಣ್ಣ ಮನವಿ ಮಾಡಿದರು.







