ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ: ಶೆಹ್ಲಾ ರಶೀದ್
ಬೆಂಗಳೂರಿನಲ್ಲಿ ‘ಗೌರಿ ದಿನ’

ಬೆಂಗಳೂರು, ಜ.29: ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ಇದರ ವಿರುದ್ಧ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಜೆಎನ್‌ಯು ವಿದ್ಯಾರ್ಥಿನಿ, ಹೋರಾಟಗಾರ್ತಿ ಶೆಹ್ಲಾ ರಶೀದ್ ಆರೋಪಿಸಿದ್ದಾರೆ.
ಸೋಮವಾರ ನಗರದ ಪುರಭವನದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಗೌರಿ ದಿನ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ ಎನ್ನಲು ನನಗೆ ಭಯವಿಲ್ಲ. ಇದರ ಮೊದಲ ದಾಳಿಯ ಸಲುವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಲೆಗೈಯಲಾಯಿತು ಎಂದರು.
ಗೋವಾದಲ್ಲಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ಆರೆಸ್ಸೆಸ್ ಕೈವಾಡ ಇರುವ ದಟ್ಟ ಆರೋಪಗಳಿವೆ. ಆದರೆ, ಅದು ರಾಜಕೀಯ ಬಲದಿಂದ ತಪ್ಪಿಸಿಕೊಳ್ಳತ್ತಿದೆ. ಗೌರಿ ಹತ್ಯೆ ಪ್ರಕರಣದಲ್ಲೂ ಸನಾತನ ಸಂಸ್ಥೆಯೊಂದರ ಕೈವಾಡ ಇದೆ ಎಂದು ಶೆಹ್ಲಾ ರಶೀದ್ ಆರೋಪಿಸಿದರು.
ಆರೆಸ್ಸೆಸ್‌ನಿಂದ ನಮಗೆ ದೇಶಪ್ರೇಮದ ಬೋಧನೆಯ ಅಗತ್ಯವಿಲ್ಲ ಎಂದ ಅವರು, ಕರ್ಣಿ ಸೇನೆಯ ಮುಖ್ಯಸ್ಥ ಭಾರತವನ್ನು ತುಂಡರಿಸುವ ಮಾತನ್ನಾಡಿದ್ದಾರೆ. ಆದರೆ, ಅವರು ದೇಶದ್ರೋಹಿಗಳಾಗುವುದಿಲ್ಲ. ಬದಲಾಗಿ ಉಮರ್ ಖಾಲಿದ್ ಮುಸ್ಲಿಮನೆಂಬ ಏಕ ಕಾರಣಕ್ಕೆ ದೇಶದ್ರೋಹಿಯಾಗುತ್ತಾನೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಆಮ್ಲಜನಕ ಸಿಗದ ಕಾರಣದಿಂದಾಗಿ ನೂರಾರು ಮಕ್ಕಳು ಸಾಯುತ್ತಿರುವಾಗ, ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಇಲ್ಲಿನ ಆರೋಗ್ಯ ಪರಿಸ್ಥಿತಿ ಕೆಟ್ಟು ಹೋಗಿದೆ ಎಂದು ಹೇಳುತ್ತಿದ್ದಾರೆ ಎಂದು ಶೆಹ್ಲಾ ರಶೀದ್ ಲೇವಡಿ ಮಾಡಿದರು.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುತ್ತಾರೆ. ಆದರೆ, ಎಲ್ಲಾ ಕಡೆ ಬಿಜೆಪಿ ಸರಕಾರ ಇದ್ದರೂ, ರಾಮಮಂದಿರ ಕಟ್ಟದೆ, ಅದನ್ನು ರಾಜಕೀಯ ಲಾಭಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ’.
-ಶೆಹ್ಲಾ ರಶೀದ್, ಜೆಎನ್‌ಯು ವಿದ್ಯಾರ್ಥಿನಿ







