ಸಫಾಯಿ ಕರ್ಮಚಾರಿಗಳಿಗೆ ಸರ್ವ ನೆರವು : ವೆಂಕಟೇಶ್

ಉಡುಪಿ, ಜ.29: ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ಕಾಲೋನಿ ಗಳಿಗೆ ಭೇಟಿ ನೀಡಿ, ಕಾರ್ಮಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಖುದ್ದು ಅರಿತು, ಅವರ ಆರೋಗ್ಯಕ್ಕೆ ಆದ್ಯತೆಯನ್ನು ನೀಡಿ ಆರೋಗ್ಯ ತಪಾಸಣೆಯನ್ನೊಳಗೊಂಡಂತೆ ವಿವಿಧ ಬಾಗ್ಯಗಳಡಿ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್,ವೆಂಕಟೇಶ್ ಹೇಳಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಕುಂದು-ಕೊರತೆಗಳ ಬಗ್ಗೆ ಅವರಿಂದಲೇ ಆಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಇಂದು ಉಡುಪಿಯೊಂದಿಗೆ ಮೊದಲ ಸುತ್ತಿನ ರಾಜ್ಯ ಭೇಟಿ ಮುಕ್ತಾಯಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಫಾಯಿ ಕರ್ಮಚಾರಿಗಳ ಕಾಲೋನಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಉಡುಪಿಯಲ್ಲಿ ಅಂತಹ ಗಂಭೀರ ದೂರುಗಳಿಲ್ಲದೆ ಇರುವುದರಿಂದ ಇನ್ನಷ್ಟು ಉತ್ತಮ ಯೋಜನೆಗಳ ಸಲಹೆ ನೀಡಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆ ಸ್ವಚ್ಚ ನಗರವಾಗಿದೆ. ಅನ್ಯ ಜಿಲ್ಲೆಗಳಿಗೆ ಉಡುಪಿ ಮಾದರಿ ಜಿಲ್ಲೆಯಾಗಿದ್ದು, ಇಲ್ಲಿ ಕರ್ಮಚಾರಿಗಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.
ಉಡುಪಿಯಲ್ಲಿ ಕರ್ಮಚಾರಿಗಳ ಸುರಕ್ಷತೆಗಾಗಿ ಪರಿಕರಗಳನ್ನು ನೀಡುವುದರ ಜೊತೆಗೆ, ಸೂಕ್ತವಾದ ತರಬೇತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ರಾಜ್ಯ ಸರಕಾರ ಸಫಾಯಿ ಕರ್ಮಚಾರಿಗಳ ಕನಿಷ್ಟ ವೇತನವನ್ನು 17 ಸಾವಿರಕ್ಕೆ ಹೆಚ್ಚಿಸಿದ್ದು, ನೇರವಾಗಿ ವೇತನ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಿದೆ. ಗುತ್ತಿಗೆ ಆಧಾರದಲ್ಲಿ ನಿರ್ವಹಿಸುವ ಪದ್ಧತಿಯನ್ನು ಕೊನೆಗೊಳಿಸಿ, ನೇರವಾಗಿ ನೌಕರರಿಗೆ ಆರ್‌ಟಿಜಿಎಸ್ ಮುಖಾಂತರ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಅನುಭವದ ಆಧಾರದಲ್ಲಿ ಮೇಲೆ ನೌಕರಿ ಖಾಯಮಾತಿಗೆ ಕ್ರಮವಹಿಸಿದ್ದು, 700 ಜನರಿಗೆ ಅಧ್ಯಯನ ಪ್ರವಾಸ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಫಾಯಿ ಕರ್ಮಚಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಮಗ್ರ ನೆರವು ನೀಡುವುದು ಆಯೋಗದ ಹೊಣೆಯಾಗಿದೆ. ಶಿಕ್ಷಣದಿಂದ ಸಫಾಯಿ ಕರ್ಮಚಾರಿಗಳ ಮಕ್ಕಳು ವಂಚಿತರಾಗದಂತೆ ಪ್ರತಿಷ್ಠಿತ ಶಾಲೆಗಳಲ್ಲಿ ಮೀಸಲಾತಿ ಹಾಗೂ ವಸತಿ ನಿಲಯಗಳಲ್ಲಿ ಪಿಯುಸಿವರೆಗೆ ಸಂಪೂರ್ಣ ಉಚಿತ ವಿದ್ಯಾಭಾ್ಯಸಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ರಾಜ್ಯದಲ್ಲಿ 1685 ಸೀಟುಗಳನ್ನು ಕಾದಿರಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕೇವಲ 125 ಮಕ್ಕಳು ಮಾತ್ರ ಸೇರ್ಪಡೆಗೊಂಡಿದ್ದಾರೆ. ಸಫಾಯಿ ಕರ್ಮಚಾರಿಗಳು ಎಲ್ಲೆಲ್ಲಿ ಕೆಲಸ ಮಾಡುತಿ ದ್ದಾರೆಯೋ ಅಲ್ಲಿ ಹೋಗಿ ಅವರ ಮಕ್ಕಳ ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸುವ ಕೆಲಸವಾಗಬೇಕು. ಅವರ ಸಂಪೂರ್ಣ ಅಭಿವೃದ್ಧಿಗಾಗಿ ಜ್ಯೋತಿ ಸಂಜೀವಿನಿ ಯಡಿ 10 ಕೋಟಿ.ರೂ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಗೋಕುಲನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.







