ಮೋದಿ ಪಾಲ್ಗೊಳ್ಳುವ ಪರಿವರ್ತನಾ ಯಾತ್ರೆಯ ಯಶಸ್ವಿಗೆ ದಿಲ್ಲಿಯಲ್ಲಿ ಸಭೆ
ಬೆಂಗಳೂರು, ಜ. 29: ಫೆ.4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಸಮಾರಂಭದ ಯಶಸ್ವಿಗೆ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಹೊಸದಿಲ್ಲಿಯಲ್ಲಿ ರಾಜ್ಯದ ಪ್ರಮುಖ ಮುಖಂಡರ ಸಭೆ ನಡೆಸಿದರು.
ಮಹಾದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕನ್ನಡಪರ ಸಂಘಟನೆಗಳು ಸಿದ್ದತೆ ನಡೆಸಿವೆ. ಹೀಗಾಗಿ ಆತಂಕಕ್ಕೆ ಸಿಲುಕಿರುವ ಬಿಜೆಪಿ ಮುಖಂಡರು, ಪ್ರಧಾನಿಗೆ ಯಾವುದೇ ಮುಜುಗರವಾಗದಂತೆ ಸಮಾರಂಭ ಯಶಸ್ವಿಗೊಳಿಸಲು ಶಾ ನಿವಾಸದಲ್ಲಿ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
ನಿನ್ನೆ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತಕುಮಾರ್, ಸಂತೋಷ್ ಅವರೊಂದಿಗೆ ಅಮಿತ್ ಶಾ, ಸೋಮವಾರ ವಿಧಾನ ಮಂಡಲ ವಿಪಕ್ಷ ನಾಯಕರಾದ ಶೆಟ್ಟರ್, ಈಶ್ವರಪ್ಪ, ಅಶೋಕ್, ಅರವಿಂದ ಲಿಂಬಾವಳಿ ಜತೆ ಚರ್ಚೆ ನಡೆಸಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿತಂತ್ರ ರೂಪಿಸಬೇಕು. ಬೂತ್‌ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮುಖಂಡರಿಗೆ ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.
‘ಬಿಜೆಪಿಗೆ ಅಸಾದುದ್ದೀನ್ ಓವೈಸಿ ಅಥವಾ ಬೇರಾವುದೇ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸ್ವಂತ ಬಲದ ಮೇಲೆ ಗೆಲ್ಲುವ ಸಾಮರ್ಥ್ಯವಿಲ್ಲದೇ ಎಸ್‌ಡಿಪಿಐನೊಂದಿಗೆ ಮೈತ್ರಿಗೆ ಮುಂದಾಗಿದೆ. ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ ಧೂಳೀಪಟವಾಗುವುದು ಸ್ಪಷ್ಟ. ಆದುದರಿಂದ ಇಂತಹ ಊಹಾಪೋಹಗಳನ್ನು ವ್ಯವಸ್ಥಿತವಾಗಿ ಹರಿಯಬಿಡಲಾಗಿದೆ’
-ಅಶ್ವತ್ಥ್ ನಾರಾಯಣ್ , ಬಿಜೆಪಿ ವಕ್ತಾರ







