ಕೆ.ಆರ್ ಪೇಟೆಯ ವಸತಿ ಶಾಲೆಗೆ ಇಹ್ಸಾನ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಭೇಟಿ
ಮಾನವೀಯ ನೆಲೆಗಟ್ಟಿನಲ್ಲಿ ತನಿಖೆ ನಡೆಸಲು ಆಗ್ರಹ

ಮೈಸೂರು,ಜ.29: ಮೈಸೂರಿನ ಕೆ.ಆರ್. ಪೇಟೆಯ ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಗೆ ಇಹ್ಸಾನ್ ರಾಜ್ಯಾಧ್ಯಕ್ಷರಾದ ಮೌಲಾನ ಎನ್.ಕೆ.ಎಂ ಶಾಫಿ ಸ ಅದಿಯವರು ಭೇಟಿ ಕೊಟ್ಟು ಅಲ್ಲಿನ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳೊಡನೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಡಿವೈಎಸ್ಪಿ ಜೊತೆ ಸಮಾಲೋಚನೆ ನಡೆಸಿದ ಶಾಫಿ ಸ ಅದಿಯವರು, ಝೈಬುನ್ನೀಸಾ ಪ್ರಕರಣವನ್ನು ಆತ್ಮಹತ್ಯೆ ಅಂತ ಬಿಂಬಿಸುವ ಮೂಲಕ ವ್ಯವಸ್ಥಿತವಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಸಲಾಗುತ್ತಿದೆ. ವಿದ್ಯಾರ್ಥಿನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಅಧ್ಯಾಪಕನ ವಿರುದ್ಧ ಕೊಲೆ ಕೇಸು ದಾಖಲಿಸಿ ಸೂಕ್ತ ಶಿಕ್ಷೆ ನೀಡಬೇಕಾಗಿದೆ .ಅದರಂತೆ ವಾರ್ಡನ್ ನನ್ನೂ ತನಿಖೆಗೊಳಪಡಿಸಬೇಕು ಎಂದರು.
ಮೃತ ಝೈಬುನ್ನೀಸಾಳ ಸಹೋದರ - ಸಹೋದರಿಯ ಹೇಳಿಕೆಯನ್ನು ಪಡೆದು ಆ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದ ಶಾಫಿ ಸ ಅದಿಯವರು ಈ ಪ್ರಕರಣದಲ್ಲಿ ರಾಜಕೀಯ ನಡೆಸುವಂತಾಗಲು ಯಾರಿಗೂ ಅವಕಾಶ ನೀಡಬಾರದು. ಅದಲ್ಲದೆ ಈ ಪ್ರಕರಣವನ್ನು ಧರ್ಮದ ಆಧಾರದಲ್ಲಿ ನೋಡದೆ ಮಾನವೀಯ ನೆಲೆಗಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಸೂಕ್ತವಾದ ಶಿಕ್ಷೆಯನ್ನು ನೀಡಿ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಎಸ್ಸೆಸ್ಸೆಫ್ ನಾಯಕ ಅಬೂಬಕ್ಕರ್ ಸಿದ್ದೀಕ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







