ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸಿ: ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ
ಧಾರವಾಡ, ಜ.29: ಪರಿಸರ ವೈವಿಧ್ಯಮಯ ಬದಲಾವಣೆಯಾಗಿ ಜೀವರಾಶಿಯ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಪ್ರೀತಿ, ಕಾಳಜಿ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ಅದರಲ್ಲೂ ಭವಿಷ್ಯದ ರೂವಾರಿಗಳಾದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೊಳಿಸುವುದು ಅತಿ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದ್ದಾರೆ.
ಸೋಮವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತವಾಗಿ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಹೆಚ್ಚು ಅವಲಂಬನೆ ಗುಣ ಬೆಳೆಯದಂತೆ ನೋಡಿಕೊಳ್ಳಬೇಕು. ಹಳ್ಳಿ, ಹಳ್ಳ, ಗಿಡ-ಗಂಟಿಗಳೊಂದಿಗೆ ಮಕ್ಕಳು ಸ್ನೇಹ ಬೆಳೆಸುವಂತೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಪರಿಸರ ಪ್ರೇಮ ಹೆಚ್ಚುತ್ತದೆ ಎಂದು ಪಟ್ಟಣ ಶೆಟ್ಟಿ ಹೇಳಿದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಪರಿಸರವನ್ನು ನಿರ್ಲಕ್ಷಿಸುವುದರಿಂದ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತೇವೆ. ಪ್ರಾಣಿ ಪಕ್ಷಿ, ಗಿಡ, ಮರಗಳಿಗೆ ಮತಹಾಕುವ ಅಧಿಕಾರ ಇದ್ದಿದ್ದರೆ ನಾವು ಪರಿಸರ ಕಾಪಾಡಲು ಕೇಳುವ ಅಗತ್ಯವಿರುತ್ತಿರಲಿಲ್ಲ. ಆದರೆ, ಎಲ್ಲ ರೀತಿಯ ಜ್ಞಾನ ಹೊಂದಿರುವ ಮಾನವರಿಂದಲೇ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಮಕ್ಕಳ್ಳಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ರಕ್ಷಿಸಬಹುದು ಎಂದರು.
ಪರಿಸರ ಅಧಿಕಾರಿ ವಿಜಯಕುಮಾರ ಕಡಕಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಹಸಿರು ಉಳಿಸಿ ಉತ್ತಮ ಪರಿಸರ ನಿರ್ಮಿಸುವ ಶಾಲೆಗಳಿಗೆ ನಗದು ಬಹುಮಾನದೊಂದಿಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವರ್ಷ 235ಕ್ಕೂ ಹೆಚ್ಚು ಪ್ರಸ್ತಾವನೆಗಳು ಜಿಲ್ಲೆಯ ವಿವಿಧ ಶಾಲೆಗಳಿಂದ ಸಲ್ಲಿಕೆಯಾಗಿ ದ್ದವು. ಅವುಗಳಲ್ಲಿ ನಿಯಮಾವಳಿಯಂತೆ ಮೊದಲ ಹಂತದಲ್ಲಿ ಉತ್ತಮವಾದ 30 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿಕೊಂಡು ತಜ್ಞರ ಸಮಿತಿ ಸ್ವತಃ ಆಯಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು ಎಂದರು.
ಅದರಲ್ಲಿ ಕಲಘಟಗಿ ತಾಲೂಕಿನ ಪರಸಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಿತು ಮತ್ತು ಹತ್ತು ಹಸಿರು ಶಾಲೆ ಹಾಗೂ ಹತ್ತು ಹಳದಿ ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು. ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಿ, ಎಲ್ಲ ಶಾಲೆಗಳನ್ನು ಪರಿಸರಯುಕ್ತಗೊಳಿಸುವುದು ಈ ಪ್ರಶಸ್ತಿಗಳ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ‘ನನಸಾದ ಕನಸು’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮತ್ತು ಪರಿಸರ ಮಿತ್ರ ಶಾಲೆ, ಹಸಿರು ಶಾಲೆ, ಹಳದಿ ಶಾಲೆ ಪ್ರಶಸ್ತಿಗಳನನು ಪ್ರಶಸ್ತಿ ವಿಜೇತ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ, ಉಪ ಪರಿಸರ ಅಧಿಕಾರಿ ಶೋಭಾ ಗಜಕೋಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







