ಕುರುಬರನ್ನು ಎಸ್ಟಿಗೆ ಸೇರಿಸಲು ಮುಕುಡಪ್ಪ ಒತ್ತಾಯ
ಬೆಂಗಳೂರು, ಜ.29: ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮೀಸಲಾತಿ ಪಡೆಯಲು ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಗೆ ಸೇರ್ಪಡೆ ಮಾಡಬೇಕೆಂದು ಅಹಿಂದ ರಾಜ್ಯಾಧ್ಯಕ್ಷ ಕೆ.ಮುಕುಡಪ್ಪಒತ್ತಾಯಿಸಿದ್ದಾರೆ.
ಕುರುಬ ಸಮುದಾಯದ ನೂರಾರು ಸದಸ್ಯರು, ನಮ್ಮನ್ನು ಎಸ್‌ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಸೋಮವಾರ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಕುಡಪ್ಪ, ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು. ಒಂದು ವೇಳೆ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸದೆ ಹೋದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೂಲತಃ ಅಲೆಮಾರಿಗಳಾದ ಕುರುಬ ಸಮಾಜದವರು ಕಾಲಾಂತರದಲ್ಲಿ ಕೃಷಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ಕುರುಬ ಸಮಾಜದ ಅನೇಕರು ತಮ್ಮ ಕುರಿಗಳೊಂದಿಗೆ ಅಲೆಮಾರಿಗಳಾಗಿಯೇ ಜೀವನ ಸಾಗಿಸುತ್ತಿದ್ದಾರೆ. ದೇಶದ ಪ್ರಾಚೀನ ಉದ್ಯೋಗಗಳಲ್ಲಿ ಒಂದಾದ ಪಶುಪಾಲನೆಯೇ ಸಮಾಜದ ಮೂಲ ವೃತ್ತಿಯಾಗಿದೆ. ಕುರುಬ ಸಮಾಜಕ್ಕೆ ಸಮಾನಾರ್ಥಕ ಪದ ಹೊಂದಿರುವ ಗೊಂಡ, ಕಾಡುಕುರುಬ, ಜೇನುಕುರುಬರನ್ನು ಈಗಾಗಲೇ ಎಸ್ಟಿ ಮೀಸಲಿಗೆ ಒಳಪಡಿಸಲಾಗಿದೆ. ಸಮಾಜದ ಬಹುದಿನಗಳ ಬೇಡಿಕೆಯಂತೆ ಕುರುಬ ಸಮಾಜವನ್ನು ಎಸ್ಟಿ ಮೀಸಲಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.







