ನ್ಯಾ.ಸದಾಶಿವ ವರದಿ ಶಿಫಾರಸ್ಸಿಗೆ ಖಂಡನೆ
ಬೆಂಗಳೂರು, ಜ.29: ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೊಳಪಡಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಖಂಡಿಸಿದೆ.
ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೂರಾರು ಸದಸ್ಯರು ಪ್ರತಿಭಟನೆ ನಡೆಸಿ, ನ್ಯಾ.ಸದಾಶಿವ ವರದಿ ಶಿಫಾರಸ್ಸು ಕೈಬಿಡಬೇಕೆಂದು ಒತ್ತಾಯಿಸಿದರು.
ಪತ್ರಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವಿಮಾಕಳಿ, ದಲಿತ ಸಮುದಾಯಗಳಿಗೆ ಸಿಕ್ಕ ಸೌಲಭ್ಯಗಳನ್ನು ಕುರಿತು ನ್ಯಾ.ಸದಾಶಿವ ಆಯೋಗ ವರದಿ ಬೆಳಕು ಚೆಲ್ಲುಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸೋರಿಕೆಯಾಗಿರುವ ಈ ವರದಿ ಅಂಶಗಳಿಂದಾಗಿ ದಲಿತ ಸಮುದಾಯದೊಳಗೆ ಪರಸ್ಪರ ದ್ವೇಷ, ಅನುಮಾನ, ತಪ್ಪುಕಲ್ಪನೆ ಮೂಡಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಸ್ಥಿತಿಗತಿ ಅಧ್ಯಯನಕ್ಕೆ ಸದಾಶಿವ ಆಯೋಗ ನೇಮಿಸಿದಾಗ ಎಲ್ಲರೂ ಸ್ವಾಗತಿಸಿದ್ದರು. ವರದಿ ಸಲ್ಲಿಸುವ ವೇಳೆ ಒಳ ಮೀಸಲು ಜಾರಿಗೆ ಶಿಫಾರಸ್ಸು ಮಾಡಿ ಆಯೋಗ ತನ್ನ ವ್ಯಾಪ್ತಿಯನ್ನು ಮೀರಿದೆ. ವರದಿಯನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳಲು ಸರಕಾರ ಸದಾಶಿವ ಆಯೋಗವನ್ನೇ ಹೈಜಾಕ್ ಮಾಡಿದೆ ಎಂದು ದೂರಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ವಕೀಲ ಅನಂತ ನಾಯ್ಕ್ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದರಿಂದ ಭೋವಿ ಜನಾಂಗ ಸೇರಿದಂತೆ ಇನ್ನಿತರ ಪರಿಶಿಷ್ಟ ಜಾತಿಗೆ ಸೇರಿರುವ ಅನೇಕ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸರಕಾರದ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿಯಲ್ಲೇ 101 ಜಾತಿಗಳಿದ್ದು, ಅದರಲ್ಲಿ ಭೋವಿ, ಲಮಾಣಿ, ಕೊರವ, ಬೊಪ್ಪೆ, ಜಾತಿಗೇರ ಸೇರಿ ಅನೇಕ ಜಾತಿಗಳಿದ್ದು, ಇದರಿಂದ 99 ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ವಿವರಿಸಿದರು.
ಪತ್ರಿಭಟನೆಯಲ್ಲಿ ಒಕ್ಕೂಟದ ಜಯರಾಂ, ಮುನಿಮಾರಪ್ಪ, ವಿಜಯ್ ಜಾಧವ್, ಜಿ.ಮಾದೇಶ್, ಶಂಕರಪ್ಪ ಸೇರಿ ಪ್ರಮುಖರು ಉಪಸ್ಥಿತರಿದ್ದರು.







