ಬೆಂಗಳೂರು: ಜ.30 ರಿಂದ ಕೃಷಿ ಕ್ರೀಡಾಕೂಟ
ಬೆಂಗಳೂರು, ಜ.29: ಕೇಂದ್ರ ಕೃಷಿ ಅನುಸಂಧಾನ ಪರಿಷತ್ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 18ನೆ ಅಖಿಲ ಭಾರತ ಕೃಷಿ ಕ್ರೀಡಾಕೂಟವನ್ನು ಜ.30 ರಿಂದ ಫೆ.3 ರವರೆಗೆ ನಗರದ ಜಿಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಡಾ.ಎಚ್.ಶಿವಣ್ಣ, ಕ್ರೀಡಾ ಕೂಟದಲ್ಲಿ ದೇಶದ 62 ಕೃಷಿ ವಿಶ್ವವಿದ್ಯಾಲಯಗಳಿಂದ ವಾಲಿಬಾಲ್, ಬಾಸ್ಕೆಟ್‌ಬಾಲ್, ಕಬಡ್ಡಿ, ಖೋ-ಖೋ, ಬ್ಯಾಡ್ಮಿಂಟನ್ ಹಾಗೂ ಅಥ್ಲೆಟಿಕ್ಸ್ ಕ್ರೀಡೆಗಳನ್ನೊಳಗೊಂಡ 1550 ಪುರುಷರು ಹಾಗೂ 725 ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಾಲಿಬಾಲ್ ಕ್ರೀಡೆಯಲ್ಲಿ 56 ಪುರುಷ ಹಾಗೂ 32 ಮಹಿಳಾ ತಂಡಗಳು, ಬ್ಯಾಸ್ಕೆಟ್‌ಬಾಲ್‌ನಲ್ಲಿ 38 ಪುರುಷ ಹಾಗೂ 21 ಮಹಿಳಾ ತಂಡಗಳು, ಕಬಡ್ಡಿಯಲ್ಲಿ 53 ಪುರುಷ ಹಾಗೂ 15 ಮಹಿಳಾ ತಂಡಗಳು, ಖೋ-ಖೋನಲ್ಲಿ 23 ಪುರುಷ ಹಾಗೂ 14 ಮಹಿಳಾ ತಂಡಗಳು, ಬ್ಯಾಡ್ಮಿಂಟನ್‌ನಲ್ಲಿ 54 ಪುರುಷ ಹಾಗೂ 45 ಮಹಿಳಾ ತಂಡಗಳು, ಟೇಬಲ್‌ಟೆನ್ನಿಸ್‌ನಲ್ಲಿ 55 ಪುರುಷ ಮತ್ತು 45 ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಅಥ್ಲೆಟಿಕ್ಸ್‌ನಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 100 ಮೀ., 200 ಮೀ., 400 ಮೀ., 800 ಮೀ., 1500 ಮೀ. ಓಟ, 4x100 ಮೀ. ಮತ್ತು 4x400 ಮೀ.ರಿಲೇ, ಗುಂಡು (ಶಾಟ್‌ಪುಟ್)ಎಸೆತ, ಭರ್ಜಿ (ಜಾವೆಲಿನ್) ಎಸೆತ, ಚಕ್ರ (ಡಿಸ್ಕಸ್) ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಟ್ರಿಪಲ್ ಜಂಪ್ ಕ್ರೀಡೆಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮವಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಲಿದ್ದು, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸುಖೇಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಹಾಯಕ ಮಹಾ ನಿರ್ದೇಶಕ ಡಾ.ಪಿ.ಎಸ್.ಪಾಂಡೆ, ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎನ್. ಶ್ರೀನಿವಾಸಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.







