‘ಅತ್ಯುತ್ತಮ ಸಂಸದ ಪ್ರಶಸ್ತಿ 2013-17’: ವಿಜೇತರು ಯಾರು ಗೊತ್ತಾ ?

ಹೊಸದಿಲ್ಲಿ, ಜ. 29: ಬಿಜೆಡಿ ಸಂಸದ ಭರ್ತುಹರಿ ಮೆಹತಾಬ್‌ಗೆ 2017ರ ಅತ್ಯುತ್ತಮ ಸಂಸದೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತೀಯ ಸಂಸದೀಯರ ಗುಂಪು (ಐಪಿಜಿ) ಸೋಮವಾರ ಘೋಷಿಸಿದೆ.
ಟಿಎಂಸಿಯ ಲೋಕಸಭಾ ಸಂಸದ ದಿನೇಶ್ ತ್ರಿವೇದಿ 2016ರ ಈ ಪ್ರಶಸ್ತಿ ಪಡೆಯಲಿದ್ದಾರೆ. ರಾಜ್ಯ ಸಭೆಯಲ್ಲಿ ವಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ 2015ರ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಲೋಕಸಭಾ ಸೆಕ್ರೇಟರಿಯೇಟ್ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಐದು ವರ್ಷಗಳಿಂದ ಪ್ರಶಸ್ತಿ ಘೋಷಿಸುತ್ತಿರುವ ಐಪಿಜಿ, ರಾಜ್ಯ ಸಭೆಯ ಮಾಜಿ ಸದಸ್ಯೆ ನಜ್ಮಾ ಹೆಫ್ತುಲ್ಲಾ 2013ರ ಪ್ರಶಸ್ತಿ ಪಡೆಯಲಿದ್ದಾರೆ. 2014ರ ಪ್ರಶಸ್ತಿಯನ್ನು ಲೋಕಸಭಾ ಸದಸ್ಯ ಹುಕುಮ್‌ದೇವ್ ನಾರಾಯಣ್ ಯಾದವ್ ಸ್ವೀಕರಿಸಲಿದ್ದಾರೆ. ಇವರಿಬ್ಬರೂ ಬಿಜೆಪಿ ಸದಸ್ಯರು ಎಂದಿದೆ.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮೇಲ್ಮನೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್, ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯಸ್ಥ ರಾಮ್ ಬಹುದ್ದೂರ್ ಅವರನ್ನು ಒಳಗೊಂಡ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರನ್ನು ಈ ಸಮಿತಿಗೆ ವಿಶೇಷವಾಗಿ ಆಹ್ವಾನಿಸಲಾಗಿತ್ತು.





