ಕಾಸ್ಗಂಜ್ ಗಲಭೆ: 112 ಮಂದಿ ಪೊಲಿಸ್ ವಶಕ್ಕೆ

ಕಾಸ್ಗಂಜ್ (ಉ.ಪ್ರ), ಜ.29: ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು 112 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯು ಶಾಂತ ಸ್ಥಿತಿಗೆ ಮರಳುತ್ತಿದ್ದರೂ ಇನ್ನು ಕೂಡಾ ಕೆಲವೆಡೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಡ್ರೋನ್ ಕ್ಯಾಮೆರಾದ ಮೂಲಕ ಪೊಲೀಸರು ಇಡೀ ಪ್ರದೇಶದ ಮೇಲೆ ಕಣ್ಗಾವಲಿರಿದ್ದು ಪ್ರತೀ ಮನೆಗಳಿಗೆ ತೆರಳಿ ಸ್ಫೋಟಕಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಒಂದು ವೇಳೆ ಸ್ಫೋಟಕಗಳು ಪತ್ತೆಯಾದಲ್ಲಿ ಅಂಥವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ಒಟ್ಟಾರೆ 112 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 31 ಆರೋಪಿಗಳಾಗಿದ್ದರೆ ಉಳಿದ 81 ಮಂದಿಯನ್ನು ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳು, ಅಪರಾಧಿ ಕಾನೂನು ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರಧ್ವಜ ಕಾಯ್ದೆ ಉಲ್ಲಂಘನೆ ಇತ್ಯಾದಿಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 26ರಂದು ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದ ಪರಿಣಾಮ ಓರ್ವ ಯುವಕ ಅಸುನೀಗಿದರೆ ಹಲವರು ಗಾಯಗೊಂಡಿದ್ದರು. ಆನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಹಲವು ವಾಹನಗಳನ್ನು ಕಿಡಿಗೇಡಿಗಳನ್ನು ಧ್ವಂಸಗೊಳಿಸಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲರಾಗಿದ್ದಾರೆ ಎಂದು ಲಕ್ನೊ ಪೊಲೀಸ್ ಮಹಾನಿರ್ದೇಶಕರಾದ ಒ.ಪಿ ಸಿಂಗ್ ತಿಳಿಸಿದ್ದಾರೆ.