ವಾಯು ಮಾಲಿನ್ಯದಿಂದ ಆರೋಗ್ಯ ಹಾನಿ: ಕೇಂದ್ರ, ರಾಜ್ಯಗಳಿಗೆ ಮಾನವ ಹಕ್ಕು ಆಯೋಗದಿಂದ ನೊಟೀಸ್

ಹೊಸದಿಲ್ಲಿ, ಜ.29: ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಸಂಚಾರಿ ಪೊಲೀಸರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಮುಖ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿದೆ.
ಸಂಚಾರಿ ಪೊಲೀಸರ ಆರೋಗ್ಯದ ಹಕ್ಕಿನ ವಿಷಯವನ್ನು ಪ್ರಸ್ತಾಪಿಸಿ ಸಲ್ಲಿಸಲಾಗಿರುವ ದೂರಿನ ಹಿನ್ನೆಲೆಯಲ್ಲಿ ಆಯೋಗವು ಈ ನೋಟಿಸ್ ಜಾರಿ ಮಾಡಿರುವುದಾಗಿ ಆಯೋಗವು ಸೋಮವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಸಂಚಾರಿ ಪೊಲೀಸರ ಉಸಿರಾಟದ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಅವರಲ್ಲಿ ಸಂತಾನೋತ್ಪತ್ತಿ ಶಕ್ತಿಯು ಕಡಿಮೆಯಾಗುತ್ತಿದೆ ಎಂದು ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿರುವ ಆಯೋಗವು ಎಂಟು ವಾರಗಳ ಒಳಗಾಗಿ ಗುಣಾತ್ಮಕ ಸವಿವರ ಪ್ರತಿಕ್ರಿಯೆಯನ್ನು ನೀಡುವಂತೆ ಸೂಚಿಸಿದೆ.
ಒಂದು ವೇಳೆ ಎಂಟು ವಾರಗಳ ಒಳಗಾಗಿ ರಾಜ್ಯಗಳಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಆಯೋಗವು ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ, 1993ರಲ್ಲಿ ಉಲ್ಲೇಖಿಸಲಾಗಿರುವ ದಬ್ಬಾಳಿಕೆಯ ಪ್ರಕ್ರಿಯೆ ಯು/ಎಸ್ 13ನ್ನು ಜಾರಿ ಮಾಡಲಿದೆ ಎಂದು ಆಯೋಗವು ತಿಳಿಸಿದೆ.