2017ರಲ್ಲಿ ಮುಂಬೈನಲ್ಲಿ ಅತ್ಯಾಚಾರಗಳ ಹೆಚ್ಚಳ
ಶೇ.60ರಷ್ಟು ಸಂತ್ರಸ್ತರು ಅಪ್ರಾಪ್ತ ವಯಸ್ಕರು
.jpg)
ಮುಂಬೈ,ಜ.29: ಮುಂಬೈ ಮಹಾನಗರದಲ್ಲಿ 2017ರಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆಯಾಗಿದೆ. 2016ಕ್ಕೆ ಹೋಲಿಸಿದರೆ ಕಳೆದ ವರ್ಷ ಈ ನಗರದಲ್ಲಿ 40ರಷ್ಟು ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಂಬೈ ಪೊಲೀಸರ ಅಂಕಿಅಂಶಗಳಂತೆ ಸಂತ್ರಸ್ತರಲ್ಲಿ ಶೇ.60ರಷ್ಟು ಅಪ್ರಾಪ್ತ ವಯಸ್ಕ ಬಾಲಕಿಯರಾಗಿದ್ದಾರೆ. ಸಂತ್ರಸ್ತರು ಮುಂದೆ ಬಂದು ದೂರುಗಳನ್ನು ದಾಖಲಿಸುತ್ತಿರುವ ಜೊತೆಗೆ ವಿಫಲ ಪ್ರೇಮ ವ್ಯವಹಾರಗಳು ಮತ್ತು ದಾರಿ ತಪ್ಪಿದ ಲಿವ್-ಇನ್ ಸಂಬಂಧಗಳು ಅತ್ಯಾಚಾರ ಪ್ರಕರಣಗಳು ಹೆಚ್ಚಲು ಕಾರಣಗಳಲ್ಲಿ ಸೇರಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
2016ರಲ್ಲಿ 712 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2017ರಲ್ಲಿ ಈ ಸಂಖ್ಯೆ 752ಕ್ಕೇರಿದೆ. ಆದರೆ 2016ಕ್ಕೆ ಹೋಲಿಸಿದರೆ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ಇತ್ತೀಚಿನ ವರದಿಯಂತೆ ಶೇ.95ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳು ಸಂತ್ರಸ್ತರಿಗೆ ಗೊತ್ತಿರುವವರೇ ಆಗಿದ್ದಾರೆ. ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆ ಚಟ ಮತ್ತು ಇತರ ಸಂಗತಿಗಳು ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಸೇರಿವೆ. ಇಂತಹ ಹೆಚ್ಚಿನ ಅಪರಾಧಗಳು ಪರಿಚಿತರಿಂದಲೇ ಎಸಗಲ್ಪಡುತ್ತವೆ ಮತ್ತು ಇವು ರಸ್ತೆಗಳಲ್ಲಿ ನಡೆಯುವುದಿಲ್ಲ. ಹೀಗಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆ ಕುರಿತು ಪೊಲೀಸರ ದಕ್ಷತೆಯನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಮಾಜಿ ಡಿಜಿಪಿ ಪ್ರವೀಣ ದೀಕ್ಷಿತ್ ಹೇಳಿದರು.
ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರು ಬಳಿಕ ಕುಟುಂಬ ಸದಸ್ಯರು ಮತ್ತು ಬಂಧುಗಳ ಒತ್ತಡಕ್ಕೆ ಮಣಿದು ಅಥವಾ ಕುಟುಂಬಕ್ಕೆ ಕಳಂಕ ಅಂಟಿಕೊಳ್ಳುತ್ತದೆ ಎಂಬ ಭೀತಿಯಿಂದಾಗಿ ವಿಚಾರಣೆಗೆ ಹಾಜರಾಗುವುದಿಲ್ಲ. ಇದರಿಂದಾಗಿ ಶೇ.80ರಷ್ಟು ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಪಾರಾಗುತ್ತಾರೆ. ಇದು ಸಮಾಜದ ಮೇಲೆ ಭಾರೀ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಕೆಲವೇ ಅಪರಾಧಿಗಳು ಶಿಕ್ಷೆಗೊಳಗಾಗು ವುದರಿಂದ ಅಪರಾಧಿಗಳಲ್ಲಿ ಕಾನೂನಿನ ಲವಲೇಶವೂ ಭೀತಿಯಿರುವುದಿಲ್ಲ ಮತ್ತು ಇದರಿಂದಾಗಿ ಇಂತಹ ಅಪರಾಧಗಳು ಹೆಚ್ಚುತ್ತಿವೆ. ಕಾನೂನು ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದರಿಂದ ಮಾತ್ರ ಇಂತಹ ಅಪರಾಧಗಳನ್ನು ತಡೆಯಬಹುದು ಮತ್ತು ನಮ್ಮ ಸಮಾಜವೂ ಹೊಣೆಗಾರಿಕೆಯನ್ನು ಪ್ರದರ್ಶಿಸುವ ಮತ್ತು ಸಂತ್ರಸ್ತೆಗೆ ನ್ಯಾಯ ದೊರೆಯುವವರೆಗೆ ಆಕೆಗೆ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ ಎಂದರು.
ಲಿವ್-ಇನ್ ಸಂಬಂಧಗಳು ಹಳಸುತ್ತಿರುವುದು ಮತ್ತು ಅಪ್ರಾಪ್ತ ವಯಸ್ಕರ ನಡುವೆ ಪ್ರೇಮ ವ್ಯವಹಾರಗಳು ಅತ್ಯಾಚಾರ ಪ್ರಕರಣಗಳು ಹೆಚ್ಚಲು ಪ್ರಮುಖ ಕಾರಣಗಳಾಗಿವೆ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಹಾಲಿ ನ್ಯಾಯವಾದಿ ವೈ.ಪಿ.ಸಿಂಗ್ ಅವರು ಹೇಳಿದರು.