ಕಾಸ್ ಗಂಜ್ ಹಿಂಸಾಚಾರದಲ್ಲಿ ನಾನು ಮೃತಪಟ್ಟಿಲ್ಲ ಎಂದ ರಾಹುಲ್ ಉಪಾಧ್ಯಾಯ
"ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು ಜನರನ್ನು ಪ್ರಚೋದಿಸಲಾಗಿತ್ತು"

ಲಕ್ನೋ, ಜ.30: ಉತ್ತರ ಪ್ರದೇಶದ ಕಾಸ್ ಗಂಜ್ ಎಂಬಲ್ಲಿ ಗಣರಾಜ್ಯೋತ್ಸವ ದಿನದಂದು ಭುಗಿಲೆದ್ದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆನ್ನಲಾದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನಾದ 24 ವರ್ಷದ ರಾಹುಲ್ ಉಪಾಧ್ಯಾಯ ಕಾಸ್ ಗಂಜ್ ಗೆ ಮರಳಿದ್ದಾರೆ. ತಾನು `ಸತ್ತಿಲ್ಲ' ಇನ್ನೂ ಜೀವಂತವಾಗಿದ್ದೇನೆ ಎಂದು ತಿಳಿಸಿರುವ ರಾಹುಲ್ ತನ್ನ ಸಾವಿನ ಹೆಸರಲ್ಲಿ ಕೋಮುದ್ವೇಷ ಹಬ್ಬಿಸಲಾಗಿತ್ತು ಎಂದು ಹೇಳಿದ್ದಾರೆ.
ಗಲಭೆಯ ಸಂದರ್ಭ ಉಪಾಧ್ಯಾಯ ಹಾಗೂ ಚಂದನ್ ಗುಪ್ತ ಸಾವಿಗೀಡಾಗಿದ್ದಾರೆಂದು ಹೇಳಲಾಗಿತ್ತು. ಈ ಇಬ್ಬರ ಸಾವನ್ನು ಪ್ರತಿಭಟಿಸಿ ಮೂರು ದಿನಗಳ ಕಾಲ ಹಿಂಸಾಚಾರ ನಡೆದಿತ್ತು. ಉಪಾಧ್ಯಾಯ ಜೀವಂತವಾಗಿದ್ದಾನೆಂದು ಆಲಿಘರ್ ಐಜಿ ಸಂಜೀವ್ ಗುಪ್ತಾ ಹೇಳಿದ್ದಾರೆ.
"ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಂತೆ ರಾಹುಲ್ ಉಪಾಧ್ಯಾಯ ಸತ್ತಿಲ್ಲ. ಸುಳ್ಳು ವದಂತಿಗಳನ್ನು ಹರಡಿದ ಆರೋಪದ ಮೇಲೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ'' ಎಂದು ಗುಪ್ತಾ ತಿಳಿಸಿದ್ದಾರೆ.
ಸಣ್ಣ ಮಾಧ್ಯಮ ಸಂಸ್ಥೆಯೊಂದನ್ನು ನಡೆಸುವ ಗುಪ್ತಾ ಆಲಿಘರ್ ನ ನಗ್ಲಾ ಖಂಜಿ ಎಂಬಲ್ಲಿರುವ ಮನೆಯಲ್ಲಿರುವಾಗ ತನ್ನ 'ಸಾವಿನ' ಸುದ್ದಿ ಹಬ್ಬುತ್ತಿರುವ ಬಗ್ಗೆ ತಿಳಿದುಕೊಂಡಿದ್ದೆ. ಹಲವಾರು ಕರೆಗಳೂ ತನಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ನಂತರ ಟಿವಿ ವಾಹಿನಿಗಳಲ್ಲಿ ತನ್ನ ಸಾವಿನ ಬಗ್ಗೆ ಸುದ್ದಿ ಬಿತ್ತರವಾಗುತ್ತಿರುವುದನ್ನು ನೋಡಿ ಗುಪ್ತಾಗೆ ಆಘಾತವಾಗಿತ್ತು.
"ನನ್ನ ಸಾವಿನ ಸುದ್ದಿಯನ್ನು ಉಪಯೋಗಿಸಿ ಕೆಲವರು ಹಿಂಸೆಯನ್ನು ಇನ್ನಷ್ಟು ಪ್ರಚೋದಿಸುತ್ತಿರುವುದು ನನಗೆ ತಿಳಿದು ಬಂತು. ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು ಜನರನ್ನು ಪ್ರಚೋದಿಸಲಾಗುತ್ತಿತ್ತು. ನಾನು ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸರನ್ನು ಸಂಪರ್ಕಿಸಿದೆ'' ಎಂದು ಉಪಾಧ್ಯಾಯ ತಿಳಿಸಿದ್ದಾರೆ.