ಬಿಜೆಪಿ-ಎಂಐಎಂ ಒಳ ಒಪ್ಪಂದದ ದಾಖಲೆ ಬಿಡುಗಡೆಗೆ ಸಿದ್ಧ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಜ.30: ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಎಂಐಎಂ ಒಳ ಒಪ್ಪಂದ ಮಾಡಿಕೊಂಡಿರುವ ಕುರಿತು ನಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಲು ಸಿದ್ಧ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ವಿರುದ್ಧ ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ ಹಾಗೂ ಸುರೇಶ್‌ಕುಮಾರ್ ಮಾಡಿರುವ ಆರೋಪಗಳಿಗೆ ಈ ಮೇಲಿನಂತೆ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ಪಿಎಫ್‌ಐ, ಎಸ್‌ಡಿಪಿಐ ಜತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ನೀಡಿದ್ದರು. ನಾನು ಬಿಜೆಪಿ ಹಾಗೂ ಎಂಐಎಂ ಒಳ ಒಪ್ಪಂದದ ವಿಷಯ ಪ್ರಸ್ತಾಪ ಮಾಡಿದ ಬಳಿಕ ಈಗ ನಮ್ಮ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಸವಣೂರು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಹಾಗೂ ಪಿಎಫ್‌ಐ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರ, ಬಿಹಾರ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಂಐಎಂ, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಎಸ್‌ಡಿಪಿಐ, ಪಿಎಫ್‌ಐ ಜತೆ ಕಾಂಗ್ರೆಸ್ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಆಧಾರ ರಹಿತವಾದ ಆರೋಪಗಳನ್ನು ಮಾಡುವ ಮೂಲಕ ಶೋಭಾ ಕರಂದ್ಲಾಜೆ ಮಾಧ್ಯಮಗಳಲ್ಲಿ ಪ್ರಚಾರ ಪಡೆದು, ದಿಲ್ಲಿ ನಾಯಕರ ಗಮನ ಸೆಳೆಯಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಶೋಭಾ ಕರಂದ್ಲಾಜೆ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನಮ್ಮ ವಿರುದ್ಧ ಅವರು ಮಾಡಿರುವ ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ನಾನು ಬಿಜೆಪಿ ಹಾಗೂ ಎಂಐಎಂ ಒಳ ಒಪ್ಪಂದದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ಶಾಸಕ ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಈಗಾಗಲೆ ಅವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಪತ್ರದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆದರಿಕೆ ಪತ್ರವನ್ನು ಬರೆದವರು ಯಾವುದೇ ಸಂಘಟನೆಗಳ ಕಾರ್ಯಕರ್ತರಾಗಿರಲಿ ಅಥವಾ ರೌಡಿಗಳಾಗಿರಲಿ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಡಿಜಿಗೆ ಸೂಚನೆ ನೀಡಿದ್ದೇನೆ. ಅಗತ್ಯವಿದ್ದಲ್ಲಿ ಸಿ.ಟಿ.ರವಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ಬಂದ್‌ಗೆ ಅನುಮತಿ ನೀಡಿಲ್ಲ
ಪ್ರಧಾನಿ ನರೇಂದ್ರಮೋದಿ ಫೆ.4ರಂದು ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಬಂದ್ ಆಚರಣೆಗೆ ಅನುಮತಿ ನೀಡಿಲ್ಲ. ಬಿಜೆಪಿಯ ವಿರುದ್ಧ ಮೆರವಣಿಗೆ, ಧರಣಿ, ಪ್ರತಿಭಟನೆ ಮಾಡಬೇಕಾದರೆ ಪೊಲೀಸರ ಅನುಮತಿ ಪಡೆಯಬೇಕು. ಆದರೆ, ಸಂಸದರು, ಕೇಂದ್ರ ಸಚಿವರ ಮನೆಯ ಎದುರು ಪ್ರತಿಭಟನೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ.
-ರಾಮಲಿಂಗಾರೆಡ್ಡಿ, ಗೃಹ ಸಚಿವ







