ಯುಪಿಎ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ: ವೀರಪ್ಪ ಮೊಯ್ಲಿ

ಹೈದರಾಬಾದ್, ಜ.30: ಮಿತ್ರಪಕ್ಷಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಸಾಮರ್ಥ್ಯವಿರುವ ಸೋನಿಯಾ ಗಾಂಧಿಯವರೇ ಯುಪಿಎ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬಿಜೆಪಿಯನ್ನು ಎದುರಿಸಲು ವಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ ಸಾಗುತ್ತಿರುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರೇ ಯುಪಿಎ ಅಧ್ಯಕ್ಷತೆಗೆ ಸೂಕ್ತ ವ್ಯಕ್ತಿ. ಅವರಲ್ಲಿ ಮಿತ್ರಪಕ್ಷಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಸಾಮರ್ಥ್ಯವಿದ್ದು, ಈ ಹಿಂದೆ 2004 ಹಾಗೂ 2009ರಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ ಎಂದು ಮೊಯ್ಲಿ ಹೇಳಿದರು. ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಯುಪಿಎ ಅಧ್ಯಕ್ಷರಾಗಿಯೂ ಆಯ್ಕೆಯಾಗಲಿದ್ದಾರೆ ಎಂಬ ಊಹಾಪೋಹ ಹಬ್ಬಿತ್ತು.
ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತೋರುತ್ತಿರುವ ಸಕ್ರಿಯ ಆಸಕ್ತಿ ಕಂಡು ಅಚ್ಚರಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೊಯ್ಲಿ, ಅವರು ಈ ಹಿಂದೆ 2009 ಹಾಗೂ 2014ರಲ್ಲಿ ಯುಪಿಎ ಸರಕಾರದ ಭಾಗವಾಗಿದ್ದರು. ಯುಪಿಎಯ ಮಿತ್ರಪಕ್ಷಗಳೆಲ್ಲಾ ಈಗಲೂ ಒಕ್ಕೂಟದಲ್ಲೇ ಇವೆ ಎಂದರು.
ಸಾಂವಿಧಾನಿಕ ಆಶಯಗಳನ್ನು ನಾಶಗೊಳಿಸುವುದೇ ಬಿಜೆಪಿಯ ಗುರಿಯಾಗಿರುವುದು ಇದೀಗ ಸ್ಪಷ್ಟವಾಗಿರುವ ಕಾರಣ ಎಲ್ಲಾ ವಿಪಕ್ಷಗಳೂ ಸೇರಿ ಮೈತ್ರಿಕೂಟ ರಚಿಸಲು ನಿರ್ಧರಿಸಿವೆ. ಸಂಯುಕ್ತ ರಾಜಕಾರಣ, ಸಮಾಜವಾದ, ಜಾತ್ಯಾತೀತತೆ ಹಾಗೂ ಸಂವಿಧಾನದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಎಂದವರು ದೂರಿದರು. ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ನಾವು ಒಗ್ಗೂಡುತ್ತಿಲ್ಲ. ಎಲ್ಲಾ ಪ್ರಜಾಪ್ರಭುತ್ವ ವಿರೋಧಿ ಅಂಶಗಳನ್ನು ಒಳಗೊಂಡಿರುವ ಬಿಜೆಪಿ ಎದುರು ಹೋರಾಡುವ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಪ್ರಮುಖ ಉದ್ದೇಶ ಇದರ ಹಿಂದಿದೆ ಎಂದು ಮೊಯ್ಲಿ ಹೇಳಿದರು. ಅಲ್ಲದೆ ಮೈತ್ರಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಸ್ವಂತ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದೂ ಅವರು ತಿಳಿಸಿದರು.
ಬಿಜೆಪಿಯನ್ನು ವಿರೋಧಿಸುವ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಲು ಇದು ಸಕಾಲವಾಗಿದೆ. ಇಲ್ಲದಿದ್ದರೆ ರಾಷ್ಟ್ರೀಯ ಸದೃಢತೆ ಸಾಧ್ಯವಾಗದು ಎಂದು ಮೊಯ್ಲಿ ಹೇಳಿದರು.