ಬಾಲಕನ ಅಪಹರಣ: ಐವರ ಬಂಧನ

ಬೆಂಗಳೂರು, ಜ.30: ಐದು ವರ್ಷದ ಬಾಲಕನನ್ನು ಅಪಹರಿಸಿ 35 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರನ ಕಾಲಿಗೆ ಗುಂಡು ಹಾರಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಜುನಾಥ ನಗರದ ಅಭಿಷೇಕ್(23), ಕಸ್ತೂರ್‌ಬಾನಗರದ ದಿವ್ಯತೇಜ(22), ಹರ್ಷಿತ್ (18), ಚಾಮರಾಜಪೇಟೆಯ ವಿಠಲ್ನಗರ ಶ್ರೀಕಾಂತ್(19) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಜ.28ರಂದು ರಾಜೇಶ್ ಎಂಬವರು ತಮ್ಮ ಮಗು ಚಂದನ್(5)ನನ್ನು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಪಹರಿಸಿದ್ದಾರೆಂದು ಕೆ.ಪಿ.ಅಗ್ರಹಾರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ವಿಶ್ಲೇಷಣೆಯಿಂದ ಬಾಲಕನ ಪೋಷಕರ ಜೊತೆಯಲ್ಲಿದ್ದ ಅಭಿಷೇಕ್ ಮೇಲೆಯೇ ಅನುಮಾನ ವ್ಯಕ್ತವಾಗಿದ್ದರಿಂದ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೆಂಗೇರಿ ವ್ಯಾಪ್ತಿಯ ಕೊಮ್ಮಘಟ್ಟ ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸ್ಯಾಂಟ್ರೋ ಕಾರಿನಲ್ಲಿ ಆರೋಪಿಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ಸುತ್ತುವರಿದಾಗ ಚಾಲಕನ ಸೀಟಿನಲ್ಲಿದ್ದ ಆರೋಪಿ ದಿವ್ಯತೇಜ ಕಾರಿನಿಂದ ಇಳಿದು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಆರೋಪಿ ದಿವ್ಯತೇಜನ ಬಲಗಾಲಿಗೆ ತಗುಲಿದ ಪರಿಣಾಮ ಆತ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ತಕ್ಷಣ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಕಾರಿನಲ್ಲಿದ್ದ ಇನ್ನುಳಿದ ಆರೋಪಿಗಳಾದ ಶ್ರೀಕಾಂತ್, ಹರ್ಷಿತ್‌ನನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ. ಬಾಲಕನನ್ನು ರಕ್ಷಿಸಿದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಪ್ರಮುಖ ಅಪಹರಣಕಾರನಾದ ದಿವ್ಯತೇಜನ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಎರಡು ಕೊಲೆಯತ್ನ ಪ್ರಕರಣ ಹಾಗೂ ಇನ್ನಿತರ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







