ಉತ್ತರ ಪ್ರದೇಶ: ಆಸ್ಪತ್ರೆಯ ಗೇಟ್ ಬಳಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಇಲ್ಲದ್ದಕ್ಕೆ ದಾಖಲಾತಿಗೆ ನಕಾರ

ಜೌನ್ ಪುರ್, ಜ.30: ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಖಾತೆ ಹೊಂದಿಲ್ಲದ ಕಾರಣ ಗರ್ಭಿಣಿ ಮಹಿಳೆಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ ನಿರಾಕರಿಸಿದ್ದು, ಆಕೆ ಆಸ್ಪತ್ರೆಯ ಗೇಟಿನ ಸಮೀಪವೇ ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಜೌನ್ ಪುರ್ ನಲ್ಲಿ ನಡೆದಿದೆ.
ಶಹಾಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ತುಂಬು ಗರ್ಭಿಣಿಯಾದ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯತನದಿಂದಾಗಿ ಮಹಿಳೆ ಆಸ್ಪತ್ರೆ ಗೇಟಿನ ಬಳಿ ಮಗುವಿಗೆ ಜನ್ಮ ನೀಡುವಂತಾಗಿದೆ. ಗಂಟೆಗಳ ಕಾಲ ಮಗು ನೆಲದಲ್ಲೇ ಇತ್ತು ಎನ್ನಲಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರೊಬ್ಬರು, “ರಾಜ್ಯದಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಮುಖ್ಯಮಂತ್ರಿ ಆದಿತ್ಯನಾಥ್ ರ ಭರವಸೆಯನ್ನು ಈ ಘಟನೆ ಹುಸಿಯಾಗಿಸಿದೆ” ಎಂದಿದ್ದಾರೆ.
“ಸರಕಾರವು ಹಲವು ಭರವಸೆಗಳನ್ನು ನೀಡುತ್ತಿದ್ದರೂ ಈ ಎಲ್ಲಾ ಭರವಸೆಗಳನ್ನು ಈ ಘಟನೆಯು ಹುಸಿಯಾಗಿಸಿದೆ. ನಾವು ಸುಳ್ಳು ಹೇಳುತ್ತಿಲ್ಲ. ಅನಾರೋಗ್ಯಕರ ವಾತಾವರಣದಲ್ಲಿ ಮಹಿಳೆಯು ಹೇಗೆ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಫೋಟೊಗಳಿವೆ” ಎಂದವರು ಹೇಳಿದರು.