ಉವೈಸಿ ಸೇರಿ ಯಾರೊಂದಿಗೂ ನಾವು ಒಳ ಒಪ್ಪಂದ ಮಾಡಿಕೊಂಡಿಲ್ಲ: ಯಡಿಯೂರಪ್ಪ

ದಾವಣಗೆರೆ,ಜ.30: ಉವೈಸಿ ಸೇರಿದಂತೆ ಬೇರೆ ಯಾರ ಜೊತೆಗೂ ನಾವು ಒಳಒಪ್ಪಂದ ಮಾಡಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ತಾಲೂಕಿನ ಅಣಜಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಿಜೆಪಿ ಮಾಯಕೊಂಡ ವಿಧಾನಸಭಾ ಕೇತ್ರದ ಹರಿಜನ (ಮಾದಿಗ) ಜಾಗೃತಿ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಅಲ್ಪಸಂಖ್ಯಾತ ಸಂಘಟನೆಗಳ ಜೊತೆ ಒಳ ಒಪ್ಪಂದ-ಹೊರ ಒಪ್ಪಂದ ಮಾಡಿಕೊಂಡಿಲ್ಲ. ಇದರ ಅವಶ್ಯಕತೆಯೂ ನಮಗಿಲ್ಲ. ಈ ಕುರಿತು ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತದೆ. ಯಾರ ಜೊತೆಯು ಒಪ್ಪಂದವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ನಾಯಕರಾದ ಸಿ.ಟಿ. ರವಿ ಹಾಗೂ ಕೆ.ಎಸ್. ಈಶ್ವರಪ್ಪ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಶೇ. 50ರಷ್ಟು ಯುವಕರು ದೇಶದ ಭವಿಷ್ಯ ನಿರ್ಧರಿಸುತ್ತಾರೆ. ಪ್ರಧಾನಿ ಮೋದಿ ಸಹ ಯುವಕರ ಭವಿಷ್ಯದ ಆಧಾರದ ಮೇಲೆ ದೇಶದ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರಲಿದ್ದು, ಮಾರ್ಚ್‍ನಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯಲಿದೆ. ಯುವಜನತೆ, ರೈತರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.







