ಸೃಜನಶೀಲ ಸಾಹಿತ್ಯ ರಚನೆಯಾಗಲಿ: ಡಾ.ಮನು ಬಳಿಗಾರ್

ಬೆಂಗಳೂರು, ಜ. 30: ಯುವ ಜನತೆ ಸೃಜನಶೀಲ ಸಾಹಿತಿಯಾಗಿ ರೂಪುಗೊಳ್ಳಬೇಕಾದರೆ ಪ್ರಚಲಿತ ವಿದ್ಯಮಾನಕ್ಕೆ ಹೊಂದುವಂತಹ ಸಾಹಿತ್ಯ ರಚನೆಯಲ್ಲಿ ತೊಡಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣರಾಜ ಪರಿಷ್ಮಂದಿರದಲ್ಲಿ ನಾಡೋಜ ಚಂದ್ರಶೇಖರ ಕಂಬಾರ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ಚಂದ್ರಶೇಖರ ಕಂಬಾರರ ಸಾಹಿತ್ಯ ಕುರಿತು ರಾಷ್ಟೀಯ ವಿಚಾರ ಸಂಕಿರಣ ಹಾಗೂ ನಾಡೋಜ ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಯುವಜನತೆ ಕಾರ್ಯನಿರತರಾಗಬೇಕು. ಜೊತೆಗೆ, ಪ್ರಚಲಿತ ವಿದ್ಯಮಾನಕ್ಕೆ ಹೊಂದುವಂತಹ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಒಬ್ಬ ಸಾಹಿತಿಗೆ ಬರವಣಿಗೆ ಮೂಲಕ ಓದುಗರನ್ನು ತನ್ನಡೆಗೆ ಸೆಳೆಯುವ ಶಕ್ತಿ ಇರಬೇಕು. ಕಂಬಾರರು ಎಲ್ಲ ವರ್ಗದ ಜನರಿಗೂ ಸಾರ್ವಕಾಲಿಕವಾಗಿ ಅನ್ವಯವಾಗುವಂತಹ ಸಾಹಿತ್ಯ ರಚಿಸಿದ್ದಾರೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಕಂಬಾರರ ಸಾಹಿತ್ಯ ಮಹತ್ತರ ಪಾತ್ರವಹಿಸಿವೆ. ಯುವ ಜನತೆ ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.
ಚಂದ್ರಶೇಖರ ಕಂಬಾರ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಂ.ದಯಾನಂದ್, ಮಹಿಳೆ, ಮಕ್ಕಳ ಸಮಸ್ಯೆಗಳ ಕುರಿತು ಕಳೆದೆರಡು ವರ್ಷಗಳಿಂದ ನಾಟಕಗಳ ಮೂಲಕ ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, 50ಜನ ಬರಹಗಾರರನ್ನು ಒಂದೆಡೆ ಸೇರಿಸಿ, 37 ನಾಟಕಗಳನ್ನು ರಚಿಸಿ, 27 ನಾಟಕಗಳನ್ನು ರಂಗಕ್ಕೆ ತಂದು ಪ್ರದರ್ಶನ ಮಾಡಿರುವುದು ನಮ್ಮ ನಾಡಿನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಎಲ್.ಎನ್.ಮುಕುಂದರಾಜ್, ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಚಂದ್ರಶೇಖರ ಎಸ್.ವಿಶಾಲ, ಪ್ರಧಾನ ಕಾರ್ಯದರ್ಶಿ ನೀಲಕಂಠೇಗೌಡ ಸೇರಿದಂತೆ ಪ್ರಮುಖರಿದ್ದರು.







