ಚಂದ್ರಶೇಖರ್ ಆಝಾದ್ ಬಿಡುಗಡೆಗೆ ಒತ್ತಾಯಿಸಿ ‘ಜೈಲ್ ಭರೋ’: ಭೀಮ್ ಸೇನೆ ನಿರ್ಧಾರ
ಉ.ಪ್ರದೇಶ ಸರಕಾರದ ವಿರುದ್ಧ ಆಕ್ರೋಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜ.30: ಕರ್ಣಿ ಸೇನೆಯ ಕಾರ್ಯಕರ್ತರು ಪ್ರತಿಭಟನೆಯ ಸಂದರ್ಭ ಶಾಲಾ ವಾಹನದ ಮೇಲೆ ದಾಳಿ ನಡೆಸಿದ್ದಲ್ಲದೆ ಹಿಂಸಾಚಾರದ ಬೆದರಿಕೆ ಒಡ್ಡಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಉ.ಪ್ರದೇಶ ಸರಕಾರ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಭೀಮ್ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ರನ್ನು ಬಂಧಿಸಿ ಜೈಲಿಗಟ್ಟಿರುವುದು ನ್ಯಾಯವೇ ಎಂದು ಭೀಮ್ಸೇನಾ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ ಚಂದ್ರಶೇಖರ್ ಆಝಾದ್ರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ದಿಲ್ಲಿಯಲ್ಲಿ ಭೀಮ್ಸೇನಾ ಕಾರ್ಯಕರ್ತರು ಹಾಗೂ ದಲಿತರು ಪ್ರತಿಭಟನೆ ನಡೆಸಿ ಉ.ಪ್ರದೇಶ ಸರಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ನಾಯಕನನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಸಹಾರನ್ಪುರದಲ್ಲಿ ‘ಜೈಲ್ ಭರೊ’ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.
ಬಿಜೆಪಿ ಆಳ್ವಿಕೆಯ ಐದು ರಾಜ್ಯಗಳಲ್ಲಿ ದಾಂಧಲೆ ನಡೆಸಿದ ಕರ್ಣಿ ಸೇನೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಮುಖಂಡರನ್ನು ಬಂಧಿಸಿರುವ ಸರಕಾರ, ಕರ್ಣಿಸೇನೆಯ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯಡಿ ಬಂಧಿತರಾಗಿರುವ ಚಂದ್ರಶೇಖರ್ ಆಝಾದ್ರನ್ನು ಫೆ.3ರಂದು ಬಿಡುಗಡೆಗೊಳಿಸಬೇಕಿತ್ತು. ಆದರೆ ‘ಮನುವಾದಿ’ ಧೋರಣೆಯ ಉ.ಪ್ರದೇಶ ಸರಕಾರ ನಮ್ಮ ನಾಯಕರ ವಿರುದ್ಧದ ‘ಎನ್ಎಸ್ಎ’ಯನ್ನು ವಿಸ್ತರಿಸಿದೆ. ಇದನ್ನು ಖಂಡಿಸಿ ಭೀಮ್ಸೇನೆಯ ಸಹಾರನ್ಪುರ ಘಟಕವು ‘ಜೈಲ್ ಭರೋ’ ಆಂದೋಲನ ಹಮ್ಮಿಕೊಳ್ಳಲಿದೆ.
ಸಹಾರನ್ಪುರ ಘಟಕದ ಕಾರ್ಯಕರ್ತರು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ . ಒಂದು ವೇಳೆ ಸರಕಾರ ಇದಕ್ಕೂ ಸ್ಪಂದಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು . ಭೀಮ್ಸೇನೆಯ ಕಾರ್ಯಕರ್ತರನ್ನು ಬಂಧಿಸಿಡಲು ಜೈಲಿನಲ್ಲಿ ಜಾಗವಿಲ್ಲದ ಸ್ಥಿತಿ ಬರಬಹುದು ಎಂದು ಭೀಮ್ಸೇನೆಯ ವಕ್ತಾರರು ತಿಳಿಸಿದ್ದಾರೆ.
ಈ ಮಧ್ಯೆ, ಮಂಗಳವಾರ ಸಹಾರನ್ಪುರದಲ್ಲಿ ರವಿದಾಸ ಜಯಂತಿ ಕಾರ್ಯಕ್ರಮ ಅತ್ಯಂತ ಶಾಂತರೀತಿಯಲ್ಲಿ ನಡೆಯಿತು. 2017ರ ಮೇ 9ರಂದು ಸಹಾರನ್ಪುರದಲ್ಲಿ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಭೀಮ್ಸೇನೆ ‘ಮಹಾಪಂಚಾಯತ್’ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಆದರೆ ಸಾರ್ವಜನಿಕ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಅದಾಗಲೇ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಹ್ವಾನ ರವಾನೆಯಾಗಿದ್ದು, ನೂರಾರು ಕಾರ್ಯಕರ್ತರು ನಿಗದಿತ ದಿನದಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಸಂದರ್ಭ ಪೊಲೀಸರು ಅವರನ್ನು ಚದುರಿಸಲು ಯತ್ನಿಸಿದಾಗ ಭೀಮ್ಸೇನೆ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಮುಂದಾದರು. ಘಟನೆಗೆ ಸಂಬಂಧಿಸಿ ಭೀಮ್ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನ್ನ ಬಂಧನವಾಗಬಹುದು ಎಂಬ ಭೀತಿಯಿಂದ ಚಂದ್ರಶೇಖರ್ ಭೂಗತರಾಗಿದ್ದರು.
ಬಳಿಕ ಹಿಮಾಚಲಪ್ರದೇಶದ ಡಾಲ್ಹೌಸಿ ಎಂಬಲ್ಲಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು.