ಗಾಂಧಿವಾದ ನಿರ್ದಿಷ್ಟವಾದ ವಾದವಲ್ಲ: ಡಾ.ಕೆ.ಸತ್ಯನಾರಾಯಣ

ಬೆಂಗಳೂರು, ಜ.30: ಗಾಂಧೀವಾದ ಎನ್ನುವುದು ಒಂದು ನಿರ್ದಿಷ್ಟವಾದ ವಾದವಲ್ಲ. ಗಾಂಧೀಜಿಯವರಿಗೆ ಪ್ರಾಯೋಗಿಕತೆ ಮತ್ತು ಪ್ರಯೋಗಶೀಲತೆ ಎರಡೂ ಮುಖ್ಯವಾಗಿದ್ದರಿಂದ ಅವರ ಚಿಂತನೆ ಸದಾ ಬೆಳೆಯುತ್ತಲೇ ಇದೆ ಎಂದು ಕತೆಗಾರ ಡಾ. ಕೆ. ಸತ್ಯನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ದೇಶವನ್ನು ಒಂದು ಕುಟುಂಬದಂತೆ ವಿವರಿಸಿಕೊಂಡಿದ್ದರು. ಒಂದು ಕುಟುಂಬದಂತೆ ಎಲ್ಲರ ಜೊತೆಗೂ ಸಂಬಂಧ, ಜಗಳ, ಪ್ರೀತಿ ಎಲ್ಲವೂ ಇದ್ದಾಗ ಮಾತ್ರ ಒಂದು ಅರ್ಥಪೂರ್ಣ ದೇಶ ರೂಪುಗೊಳ್ಳುತ್ತದೆ ಎಂದು ಅವರು ನಂಬಿದ್ದರು ಎಂದು ಹೇಳಿದರು.
ಗಾಂಧೀಜಿಯವರ ರಾಷ್ಟ್ರೀಯತೆ ದೇಶದ ಗಡಿಗೆರೆಗಳಿಗೆ ಸೀಮಿತವಾದುದಲ್ಲ. ಅದಕ್ಕೊಂದು ವ್ಯಾಪಕ ನಾಗರಿಕ ಆಯಾಮವಿತ್ತು. ಗಾಂಧೀವಾದ ಕೇವಲ ಗಾಂಧಿವಾದಿಗಳಿಂದ ಮಾತ್ರ ಬೆಳೆಯುತ್ತಿಲ್ಲ. ಅದನ್ನು ವಿಜ್ಞಾನಿಗಳು, ತಂತ್ರಜ್ಞಾನಿಗಳು, ವಿದೇಶಿಯರು ಎಲ್ಲರೂ ವಿವರಿಸಿಕೊಂಡು ಸಮಕಾಲೀನ ಅರ್ಥದಲ್ಲಿ ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ ಎಂದು ಅವರು ನುಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಡಾ.ಲೋಕೇಶ್ ಮಾತನಾಡಿ, ಗಾಂಧೀಜಿ ತಮ್ಮ ಗ್ರಾಮ ಸ್ವರಾಜ್ ಕಲ್ಪನೆಯ ಮೂಲಕ ಲಕ್ಷಾಂತರ ಹಳ್ಳಿಗಳ ಭವಿಷ್ಯವನ್ನು ಕುರಿತು ಯೋಚಿಸಿದರು. ಗ್ರಾಮಗಳು ಅಭಿವೃದ್ಧಿಯಾಗದಿದ್ದರೆ ದೇಶ ಉದ್ಧಾರವಾಗದು ಎಂದು ನಂಬಿದ್ದರು. ಗಾಂಧಿ ನಿರ್ಗಮನದ ನಂತರ, ಗಾಂಧಿ ಚಿಂತನೆಯನ್ನು ಆಧರಿಸಿ ಭಾರತದ ಸರಕಾರಗಳು ಗ್ರಾಮ ಸಬಲೀಕರಣ ಹಾಗೂ ಅಧಿಕಾರ ವಿಕೇಂದ್ರೀಕರಣ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತಂದಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅರ್ಥಶಾಸ್ತ್ರಜ್ಞ ಎಸ್.ಆರ್.ಕೇಶವ್ ಅವರು ನಡೆಸಿದ ಗಾಂಧಿ ಕ್ವಿಜ್‌ನಲ್ಲಿ ಪ್ರಶಸ್ತಿ ಪಡೆದ ಸೆಂಟ್ ಫ್ರಾನ್ಸಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಟರಾಜ್ ಹುಳಿಯಾರ್ ಉಪಸ್ಥಿತರಿದ್ದರು.







