ಕಾಸ್ ಗಂಜ್ ಗಲಭೆ: ಪ್ರಶ್ನಿಸಿದ ಜಿಲ್ಲಾಧಿಕಾರಿ ವಿರುದ್ಧ ಆದಿತ್ಯನಾಥ್, ಬಿಜೆಪಿ ಆಕ್ರೋಶ

ರಾಘವೇಂದ್ರ ವಿಕ್ರಮ ಸಿಂಗ್
ಲಕ್ನೋ,ಜ.30: ಗಣರಾಜ್ಯೋತ್ಸವ ದಿನದಂದು ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಕಾಸ್ಗಂಜ್ನಲ್ಲಿ ಜನರ ಗುಂಪುಗಳು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಮರ ಪ್ರದೇಶಗಳಿಗೆ ನುಗ್ಗಿದ್ದನ್ನು ಟೀಕಿಸಿರುವ ಬರೇಲಿ ಜಿಲ್ಲಾಧಿಕಾರಿ ರಾಘವೇಂದ್ರ ವಿಕ್ರಮ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗುಂಪುಗಳು ಅಲ್ಪಸಂಖ್ಯಾತರ ಬಾಹುಳ್ಯದ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದ್ದನ್ನು ತರಾಟೆಗೆತ್ತಿಕೊಂಡಿದ್ದ ಸಿಂಗ್ ಅವರ ಫೇಸ್ ಬುಕ್ ಪೋಸ್ಟನ್ನು ಈಗ ಅಳಿಸಲಾಗಿದೆ. ಆದರೆ ಈ ಟೀಕೆಗಾಗಿ ಅವರು ಬಿಜೆಪಿ ನಾಯಕರ ತೀವ್ರ ದಾಳಿಗೆ ಗುರಿಯಾಗಿದ್ದಾರೆ.
ಸಿಂಗ್ ಹೇಳಿಕೆಗಾಗಿ ಅವರನ್ನು ಖಂಡಿಸಿರುವ ಹಲವಾರು ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಇಂತಹ ಅಧಿಕಾರಿಯು ಒಂದು ಕ್ಷಣವೂ ಅಧಿಕಾರದಲ್ಲಿರಬಾರದು ಎಂದು ಸುದ್ದಿಗಾರರಿಗೆ ತಿಳಿಸಿದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ, ತಾನು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಆದಿತ್ಯನಾಥ್ ಬಳಿ ಪ್ರಸ್ತಾಪಿಸುವುದಾಗಿ ಹೇಳಿದರು.
ಫೇಸ್ ಬುಕ್ ಪೋಸ್ಟ್ನಲ್ಲಿ ಪ್ರತಿಫಲಿಸಿರುವ ಸಿಂಗ್ ಮಾನಸಿಕತೆಯು ಅವರು ನಮ್ಮ ಮೌಲ್ಯಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಜರಗಲೇಬೇಕು ಎಂದರು.
ಅಲ್ಪಸಂಖ್ಯಾತರ ಪ್ರದೇಶದಲ್ಲಿ ಜನರ ಬಲವಂತದ ಪ್ರವೇಶ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿದ್ದವು ಎಂದು ಸಿಂಗ್ ತನ್ನ ಪೋಸ್ಟ್ನಲ್ಲಿ ಹೇಳಿದ್ದರು. ಆದಿತ್ಯನಾಥ್ ಅವರು ಮಂಗಳವಾರ ದೂರವಾಣಿಯಲ್ಲಿ ಸಿಂಗ್ ಅವರನ್ನು ತರಾಟೆಗೆತ್ತಿಕೊಂಡಿದ್ದು, ಲಕ್ನೋಗೆ ಬರುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.
ವಿವಾದಾತ್ಮಕ ಪೋಸ್ಟ್ನ್ನು ಫೇಸ್ಬುಕ್ನಿಂದ ಅಳಿಸಲಾಗಿದ್ದು, ಇದಕ್ಕೆ ಸರಕಾರದ ಒತ್ತಡ ಕಾರಣವೆನ್ನಲಾಗಿದೆ.