ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳೊಂದಿಗೆ ಧರಣಿ ನಡೆಸಿದ ತಾಯಿ
ತ್ವರಿತ ಪರಿಹಾರಕ್ಕೆ ಒತ್ತಾಯ

ತಿರುವನಂತಪುರ, ಜ. 30: ತ್ವರಿತ ಪರಿಹಾರ ವಿತರಿಸುವಂತೆ ಹಾಗೂ ಪುನರ್ವಸತಿ ಪ್ಯಾಕೇಜ್ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ತಾಯಿಯೊಬ್ಬರು ತಮ್ಮ ಎಂಡೋಸಲ್ಫಾನ್ ಪೀಡಿತ ಮಕ್ಕಳೊಂದಿಗೆ ಇಲ್ಲಿನ ಸೆಕ್ರೇಟರಿಯೇಟ್‌ನ ಮುಂಭಾಗ ಮಂಗಳವಾರ ಧರಣಿ ನಡೆಸಿದರು.
ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಾಸರಗೋಡಿನಿಂದ ಕನಿಷ್ಠ 300 ಎಂಡೊಸಲ್ಫಾನ್ ಪೀಡಿತ ಮಕ್ಕಳು ಇಂದು ಬೆಳಗ್ಗೆ ತಿರುವನಂತಪುರಕ್ಕೆ ತಲುಪಿದರು. ಧರಣಿಯನ್ನು ಮಾಜಿ ಸಚಿವ ಹಾಗೂ ಸಿಪಿಐ ನಾಯಕ ಬಿನೋಯ್ ವಿಶ್ವಂ ಜೊತೆ ಸಾಮಾಜಿಕ ಕಾರ್ಯಕರ್ತೆ ದಯಾ ಬಾ ಉದ್ಘಾಟಿಸಿದರು.
ವೈದ್ಯಕೀಯ ಶಿಬಿರದಲ್ಲಿ ಸಂತ್ರಸ್ತರು ಎಂದು ಗುರುತಿಸಿದವರನ್ನು ಕೂಡ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ದಯಾ ಬಾ ತಿಳಿಸಿದ್ದಾರೆ.
ಕೇರಳ ಸರಕಾರ ಎಂಡೋಸಲ್ಫಾನ್ ಪೀಡಿತರ ಸಮಸ್ಯೆ ಪರಿಹರಿಸದೇ ಇದ್ದರೆ ಮಾರ್ಚ್ 15ರಿಂದ ಅನಿರ್ಧಿಷ್ಟಾವದಿ ಮುಷ್ಕರ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೂರು ತಿಂಗಳ ಒಳಗೆ ಪುನರ್ವಸತಿ ಪ್ಯಾಕೇಜ್ ಹಾಗೂ ಪರಿಹಾರ ವಿತರಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಜನವರಿಯಲ್ಲಿ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.
ಎಂಡೋಸಲ್ಫಾನ್‌ನಿಂದ ಮೃತಪಟ್ಟ ಹಾಗೂ ಹಾಸಿಗೆ ಹಿಡಿದ ಅಥವಾ ಬುದ್ಧಿ ಮಾಂದ್ಯ ವ್ಯಕ್ತಿಗಳ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ನೇತೃತ್ವದ ಪೀಠ ಕೇರಳ ಸರಕಾರಕ್ಕೆ ನಿರ್ದೇಶಿಸಿತ್ತು.