ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿ: ಭಾರತ ಎಷ್ಟನೆ ಸ್ಥಾನದಲ್ಲಿದೆ ಗೊತ್ತಾ?

ಹೊಸದಿಲ್ಲಿ, ಜ.30: ಭಾರತವು ಜಗತ್ತಿನಲ್ಲೇ ಆರನೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದು 8,230 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ಅಮೆರಿಕವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನೂತನ ವಿಶ್ವ ಆರೋಗ್ಯದ ವರದಿಯು ತಿಳಿಸಿದೆ. ಅಮೆರಿಕವು 2017ರಲ್ಲಿ 64,584 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 24,803 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದೆ.
19,522 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಜಪಾನ್ ಮೂರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಒಂದು ದೇಶದ ಒಟ್ಟಾರೆ ಆಸ್ತಿಯನ್ನು ಲೆಕ್ಕಹಾಕಲು ಅದರ ಪ್ರತಿಯೊಬ್ಬ ನಾಗರಿಕನ ಬಳಿಯಿರುವ ಸಂಪತ್ತನ್ನು (ಆಸ್ತಿ, ನಗದು, ಶೇರುಗಳು, ವ್ಯವಹಾರ ಇತ್ಯಾದಿ)ಪರಿಗಣಿಸಲಾಗುತ್ತದೆ ಎಂದು ವರದಿ ತಿಳಿಸಿದೆ. 2016ರಲ್ಲಿ 6,584 ಬಿಲಿಯನ್ ಡಾಲರ್ ಇದ್ದ ಭಾರತದ ಆಸ್ತಿಯು 2017ರಲ್ಲಿ 8,230 ಬಿಲಿಯನ್ ಡಾಲರ್‌ಗೆ ತಲುಪುವ ಮೂಲಕ ಭಾರತವು ಜಗತ್ತಿನಲ್ಲೇ ಅತ್ಯುತ್ತಮ ನಿರ್ವಹಣೆ ತೋರುತ್ತಿರುವ ಸಂಪತ್ತು ಮಾರುಕಟ್ಟೆಯಾಗಿದೆ ಎಂದು ವರದಿ ತಿಳಿಸಿದೆ.