ಮಹಾತ್ಮಾ ಗಾಂಧೀಜಿ ಹತ್ಯಾ ವಿಚಾರಣೆ ಕಾನೂನಾತ್ಮಕ ಅಂತ್ಯ ಕಂಡಿಲ್ಲ: ಸುಪ್ರೀಂಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ಹೊಸದಿಲ್ಲಿ, ಜ.30: ಜನವರಿ 30ರಂದು ದೇಶವು ಮಹಾತ್ಮಾ ಗಾಂಧೀಜಿಯವರ 70ನೇ ಪುಣ್ಯತಿಥಿಯನ್ನು ಆಚರಿಸುತ್ತಿದ್ದ ಸಮಯದಲ್ಲೇ ಗಾಂಧೀಜಿ ಹಂತಕರನ್ನು ಈ ಬಗ್ಗೆ ವಿಚಾರಣೆಯು ಕಾನೂನಾತ್ಮಕ ಅಂತ್ಯವನ್ನು ತಲುಪುವ ಮೊದಲೇ ಗಲ್ಲೆಗೇರಿಸಲಾಗಿದೆ ಎಂಬ ವಾದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಲಾಗಿದೆ.
ಗಾಂಧಿ ಹತ್ಯಾ ಆರೋಪಿಗಳಾದ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ದತ್ತಾತ್ರೇಯ ಆಪ್ಟೆಯನ್ನು 1949ರ ನವೆಂಬರ್ 15ರಂದು ಅಂದರೆ ಭಾರತೀಯ ಸರ್ವೋಚ್ಚ ನ್ಯಾಯಾಲಯ (ಜನವರಿ 26,1950) ಅಸ್ತಿತ್ವಕ್ಕೆ ಬರುವ 71 ದಿನಗಳ ಮೊದಲು ಗಲ್ಲೆಗೇರಿಸಲಾಗಿತ್ತು ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.
ಈ ಅಫಿದಾವಿತ್‌ಅನ್ನು ಅಭಿನವ ಭಾರತ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಒಬ್ಬರಾದ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಸಲ್ಲಿಸಿದ್ದಾರೆ.
ಗಾಂಧೀಜಿಯನ್ನು 1948ರ ಜನವರಿ 30ರಂದು ದಿಲ್ಲಿಯ ಬಿರ್ಲಾ ಹೌಸ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 1949ರ ಜೂನ್ 21ರಂದು ಪೂರ್ವ ಪಂಜಾಬ್‌ನ ಉಚ್ಚ ನ್ಯಾಯಾಲಯವು ಗೋಡ್ಸೆ ಮತ್ತು ಆಪ್ಟೆಗೆ ಮರಣ ದಂಡನೆಯನ್ನು ಖಾಯಂಗೊಳಿಸಿ ಆದೇಶ ನೀಡಿತ್ತು. ಆದರೆ ಅವರ ಕುಟುಂಬಕ್ಕೆ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ನೀಡಲು ನ್ಯಾಯಾಲಯವು ನಿರಾಕರಿಸಿತ್ತು. 1950ರ ಜನವರಿ 26ರಂದು ಭಾರತೀಯ ಸರ್ವೋಚ್ಚ ನ್ಯಾಯಾಲಯವು ಅಸ್ತಿತ್ವಕ್ಕೆ ಬರುತ್ತಿರುವ ಕಾರಣ ಅದಕ್ಕೂ ಮೊದಲು ಈ ಪ್ರಕರಣದ ವಿಚಾರಣೆಯನ್ನು ಮುಗಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿತ್ತು ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.