ಮಹಾತ್ಮಗಾಂಧಿ ಹತ್ಯೆಯಾದ ದಿನದಿಂದ ಹಿಂದೂ ಭಯೋತ್ಪಾದನೆ ಆರಂಭವಾಗಿದೆ: ನಿಡುಮಾಮಿಡಿ ಸ್ವಾಮೀಜಿ
ಬೆಂಗಳೂರಿನಲ್ಲಿ ಕೋಮು ಸೌಹಾರ್ದತೆಗಾಗಿ ಬೃಹತ್ ಮಾನವ ಸರಪಳಿ

*ಸಿಲ್ಕ್ ಬೋರ್ಡ್‌ನಿಂದ ಹೊಸೂರ್ ರಸ್ತೆ-ಪೀಣ್ಯದಿಂದ ಶಿರಸಿ ವೃತ್ತದವರೆಗೆ ಮಾನವ ಸರಪಳಿ
*ಹಿರಿಯ ಸಾಹಿತಿ, ಚಿಂತಕರು, ಲೇಖಕರು ಭಾಗಿ
*ಬಹುತ್ವ, ಭಾವೈಕ್ಯತೆ ಮತ್ತು ಮಾನವೀಯತೆಗಾಗಿ ಕರೆ
ಬೆಂಗಳೂರು, ಜ.30: ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆ ದಿನವಾದ ಮಂಗಳವಾರ ನಗರದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ಹೊಸೂರು ರಸ್ತೆಯವರೆಗೆ ಹಾಗೂ ಪೀಣ್ಯದಿಂದ ಶಿರಸಿ ವೃತ್ತದವರೆಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಕಾರ್ಮಿಕರು ಹತ್ತು ನಿಮಿಷಗಳ ಕಾಲ ಕೈ-ಕೈ ಹಿಡಿದು ಅಖಂಡ ಮಾನವ ಸರಪಳಿ ನಿರ್ಮಿಸಿ ಕೋಮು ಸೌಹಾರ್ದ ಕಾಪಾಡಿ-ಶಾಂತಿ ಹರಡಿ ಎಂಬ ಸಂದೇಶ ಸಾರಿದರು.
ಕೋಮುಸೌಹಾರ್ದತೆ ಉಳಿಯಲಿ ಎಂಬ ಸಂದೇಶ ಸಾರಿದ ಮಾನವ ಸರಪಳಿ ಪಕ್ಷಾತೀತವಾಗಿದ್ದು, ಮಾನವ ಸಂಬಂಧ ಬೆಸೆಯುವ ಕಾರ್ಯಕ್ರಮವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದ ಜನರು ಎಲ್ಲ ಜಾತಿ, ಧರ್ಮಗಳನ್ನು ತೊರೆದು ಕೈ-ಕೈ ಹಿಡಿದು ಶಾಂತಿ, ಸೌಹಾರ್ದದ ಸಂದೇಶ ಸಾರಿದರು.
ಮಾನವ ಸರಪಳಿ ಅಂಗವಾಗಿ ಸಿಲ್ಕ್ ಬೋರ್ಡ್‌ನಿಂದ ಆರಂಭವಾಗಿ ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ಗಾರ್ವೆಬಾವಿಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ ಹಾಗೂ ಹೊಸೂರು ರಸ್ತೆವರೆಗೂ ಮತ್ತು ಪೀಣ್ಯ ಕೆನ್ನಾಮೆಟಲ್ ಇಂಡಸ್ಟ್ರಿಯಲ್ ಅರಣ್ಯ ಭವನದ ಮಾರ್ಗವಾಗಿ ಮಲ್ಲೇಶ್ವರಂ, ಮಂತ್ರಿಮಾಲ್, ನಟರಾಜಟಾಕೀಸ್, ವಿಧಾನಸೌಧ, ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಪುರಭವನ, ಕೆ.ಆರ್.ಮಾರುಕಟ್ಟೆ ಮೂಲಕ ಶಿರಸಿ ವೃತ್ತದವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿತ್ತು. ಅನಂತರ ನಗರದ ಪುರಭವನದ ಎದುರು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಕನ್ನಡ ನಾಡು ಶತಮಾನಗಳಿಂದಲೂ ಹೆಸರುವಾಸಿಯಾಗಿದೆ. ನಮ್ಮ ಆದಿಕವಿ ಪಂಪ ಹತ್ತನೇ ಶತಮಾನದಲ್ಲಿ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿ ಹೇಳಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಮಹಾಕವಿ ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದಾರೆ. ಶರಣರು, ದಾಸರು, ತತ್ವಪದಕಾರರು, ಸೂಫಿ ಸಂತರ ಕಾಲದಿಂದ ಕಾಲ ಕಾಲಕ್ಕೆ ಮಾನವ ಸೋದರತ್ವವನ್ನು ಎತ್ತಿ ತೋರಿಸಿದ್ದಾರೆ ಎಂಬ ಘೋಷಣೆಗಳು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಹಾತ್ಮಗಾಂಧಿ ಹುತಾತ್ಮರಾದ ದಿನದಿಂದ ಹಿಂದೂ ಭಯೋತ್ಪಾದನೆ ಆರಂಭವಾಗಿದೆ. ಎಲ್ಲಾ ಧರ್ಮದವರಿಗೂ ಮಹಾತ್ಮ ಗಾಂಧಿ ನಾಯಕರಾಗಿದ್ದರು. ಅವರು ಹುತಾತ್ಮರಾದ ಬಳಿಕ ಧರ್ಮ ರಾಜಕಾರಣ ಆರಂಭವಾಯಿತು. ನಮ್ಮ ದೇಶ ಒಡೆದ ಗಾಜಿನ ಕನ್ನಡಿಯಂತಾಗಿದೆ. ರಾಜಕೀಯ ಅಧಿಕಾರಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ರಾಜಕೀಯಕ್ಕಾಗಿ ಜಾತಿ ಧರ್ಮ ಕೋಮುಗಳ ನಡುವೆ ದ್ವೇಷ ಹುಟ್ಟಿಕೊಂಡಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಇಪ್ಪತ್ತನೆ ಶತಮಾನದಲ್ಲಿ ಜಾಗತೀಕರಣ ಹಾಗೂ ದೇಗುಲೀಕರಣ ಕೈ ಜೋಡಿಸಿ ದೇಶವನ್ನು ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ದೇಶಪ್ರೇಮವನ್ನೇ ದೇಶಭಕ್ತಿ ಎಂದು ಬಿಂಬಿಸಿ ಅವಮಾನ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಮಹಾತ್ಮಗಾಂಧಿಯ ಹತ್ಯೆ ವ್ಯಕ್ತಿಯ ಹತ್ಯೆಯಲ್ಲ, ಅದೊಂದು ಶಕ್ತಿಯ ಹತ್ಯೆ ಎಂದು ಹೇಳಿದರು.
ದೇಶದಲ್ಲಿ ಹುಸಿ ಸಂಸ್ಕೃತಿ, ಧಾರ್ಮಿಕತೆ, ಸುಳ್ಳು ವಿಜೃಂಭಿಸುತ್ತಿದೆ. ರುಂಡಗಳನ್ನು ಕೇಳುವ ಪುಂಡರ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಭಿನ್ನಾಭಿಪ್ರಾಯಗಳಿದ್ದರೆ ಬಲಿ ಪಡೆಯುವ ಭಾರತ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಬಹುತ್ವ, ಭಾವೈಕ್ಯತೆ, ಮಾನವೀಯ ಮೌಲ್ಯಗಳು ಹಾಗೂ ಸೌಹಾರ್ದತೆಯನ್ನು ನೆಲೆಸುವ ಭಾರತ ನಿರ್ಮಾಣ ಮಾಡುವ ಕುರಿತು ಎಲ್ಲರೂ ನಿರ್ಧಾರ ಮಾಡಬೇಕು ಎಂದು ಕರೆ ನೀಡಿದರು.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾತನಾಡಿ, ದೇಶದಲ್ಲಿ ನಮ್ಮನ್ನು ಆಳುತ್ತಿರುವ ಮತೀಯ ಸಂಘಟನೆಗಳನ್ನು ಮಟ್ಟ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೋಮುವಾದವನ್ನು ಹರಡುತ್ತಿರುವವರನ್ನು ಸರಕಾರ ಮಟ್ಟಹಾಕಬೇಕು ಹಾಗೂ ಸೂಕ್ತ ಕಾನೂನು ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನೇ ಬದಲು ಮಾಡಬೇಕು ಎಂಬಂತಹ ಹೇಳಿಕೆಗಳನ್ನು ನೀಡುವ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಕೋಮು ಸೌಹಾರ್ದವನ್ನು ನಾಶ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮಾನವ ಸರಪಳಿಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ್‌ದಾಸ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ, ಕವಿಯತ್ರಿ ಡಾ.ಕೆ.ಶರೀಫಾ, ಚಿಂತಕ ಜಿ.ಕೆ.ಗೋವಿಂದರಾವ್, ಚಿತ್ರನಟ ಚೇತನ್ ಸೇರಿದಂತೆ ಹಲವು ಸಾಹಿತಿಗಳು, ಚಿಂತಕರು, ಲೇಖಕರು, ಹೋರಾಟಗಾರರು ಭಾಗವಹಿಸಿದ್ದರು.
‘ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಹಲ್ಲೆ ಪ್ರಕರಣಗಳು ರಾಜಕೀಯ ಪಕ್ಷಗಳ ಜೊತೆ ತಳುಕು ಹಾಕಿಕೊಳ್ಳುವ ಸನ್ನಿವೇಶ ಎದುರಾಗಿದೆ. ಜಾತಿ, ಧರ್ಮಗಳ ನಡುವೆ ಕಿತ್ತಾಟಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಹುತ್ವ, ಭಾವೈಕ್ಯತೆ ಮತ್ತು ಮಾನವೀಯತೆ ಹುಟ್ಟಿಕೊಳ್ಳಬೇಕು’
-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ







