ಇವರು ನಮ್ಮ ದೇಶದ 'ಅತೀ ಬಡವ ಮುಖ್ಯಮಂತ್ರಿ': ಇವರ ಆಸ್ತಿಯೆಷ್ಟು ಗೊತ್ತಾ?

ಹೊಸದಿಲ್ಲಿ, ಜ.30: ರಾಜಕಾರಣಿಗಳೆಂದರೆ ಆಸ್ತಿ-ಪಾಸ್ತಿಗಳಿಗೇನೂ ಕೊರತೆಯಿರುವುದಿಲ್ಲ. ಆದರೆ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಅವರ ಆಸ್ತಿ ಎಷ್ಟಿದೆ ಎಂದು ತಿಳಿದರೆ ನೀವು ಆಶ್ಚರ್ಯಕ್ಕೊಳಗಾಗಬಹುದು. ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಣಿಕ್ ಸರ್ಕಾರ್ ಧನ್ಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ವೇಳೆ ವೈಯಕ್ತಿಕ ಆಸ್ತಿ ವಿವರದ ಅಫಿದಾವಿತ್ ಸಲ್ಲಿಸಲಾಗಿದ್ದು, ಇದರ ಪ್ರಕಾರ ಮುಖ್ಯಮಂತ್ರಿಯವರ ಕೈಯಲ್ಲಿರುವ ಹಣ ಕೇವಲ 1520 ರೂ!. ಅಲ್ಲದೆ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯರಾಗಿರುವ ಮಾಣಿಕ್ ಸರ್ಕಾರ್ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 2410 ರೂ.ಗಳಿವೆ. 2013ರ ಚುನಾವಣೆ ಸಂದರ್ಭ ಅವರ ಬ್ಯಾಂಕ್ ಖಾತೆಯಲ್ಲಿ 9,720 ರೂ.ಗಳಿತ್ತು!.
ಸತತ 6ನೆ ಬಾರಿಗೆ ಮುಖ್ಯಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ ತ್ರಿಪುರಾದ ದೀರ್ಘಕಾಲದ ಸಿಎಂ ಆಗಿದ್ದಾರೆ. ತಮ್ಮ ಸಂಪೂರ್ಣ 26,315 ರೂ. ಸಂಬಳವನ್ನು ಸರ್ಕಾರ್ ಪಾರ್ಟಿ ನಿಧಿಗೆ ನೀಡುತ್ತಾರೆ. ಇದರ ಬದಲಾಗಿ ಪಕ್ಷವು ಅವರ ಜೀವನೋಪಾಯಕ್ಕಾಗಿ 9,700 ರೂ.ಗಳನ್ನು ನೀಡುತ್ತದೆ.