ಗಾಂಧಿ ಹತ್ಯೆ: ಹಿಂದೂ ಮಹಾಸಭಾ ಬಹಿರಂಗ ಸಮರ್ಥನೆಗೆ ಪರಮೇಶ್ವರ್ ಖಂಡನೆ

ಬೆಂಗಳೂರು, ಜ.30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆ ತಪ್ಪಲ್ಲ ಎಂದಿದ್ದ ಹಿಂದೂ ಮಹಾಸಭಾ ಸಂಘಟನೆಯ ಕರ್ನಾಟಕ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ರಾಜು ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಖಂಡಿಸಿದ್ದಾರೆ.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಹಾಗೂ ಸಂಘಪರಿವಾರ ಗಾಂಧಿ ಹತ್ಯೆಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದರು. ಆದರೆ, ಇದೀಗ ಬಹಿರಂಗವಾಗಿಯೇ ಗಾಂಧೀಜಿಯ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಅಂದರೆ, ಅದರಲ್ಲೇ ಅರ್ಥವಿದೆ ಎಂದು ಹೇಳಿದರು.
ಪರಿವರ್ತನಾ ಯಾತ್ರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯದ ಬೆಳವಣಿಗೆಯ ಬಗ್ಗೆ ಮಾತನಾಡಿಲ್ಲ. ಮಹಾದಾಯಿ ವಿಚಾರ ಪ್ರಸ್ತಾಪಿಸಿಲ್ಲ, ಜನರ ಬಡತನದ ಸುಧಾರಿಸುವ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದರು.
ಶಂಕೆ ಇದೆ: ಓವೈಸಿ, ಬಿಜೆಪಿ ಒಳ ಮೈತ್ರಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ನಮಗೆ ಮೊದಲಿನಿಂದಲೂ ಶಂಕೆ ಇತ್ತು. ಇದೀಗ ದೃಢಪಟ್ಟಿದೆ. ಅಲ್ಲದೆ, ನಾವು ಯಾರ ಜೊತೆಗೂ ಮೈತ್ರಿಗೆ ಮುಂದಾಗಿಲ್ಲ. ಈ ಬಗ್ಗೆ ಆರೋಪ ಮಾಡುವವರು ದಾಖಲೆ ನೀಡಲಿ ಎಂದು ಸವಾಲು ಹಾಕಿದರು.







