‘ಹೇ ರಾಮ್’ ಗಾಂಧೀಜಿ ಹೇಳಿದ ಕೊನೆಯ ಶಬ್ಧವಾಗಿತ್ತೇ?
ಈ ಬಗ್ಗೆ ಅವರ ಸಹಾಯಕ ಹೇಳಿದ್ದೇನು?

ಚೆನ್ನೈ,ಜ.30: 70 ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಯವರ ಹತ್ಯೆ ನಡೆದಾಗ ಅವರು ‘ಹೇ ರಾಮ್’ ಎಂಬ ಶಬ್ದಗಳನ್ನು ಉಚ್ಚರಿಸಿರಲಿಲ್ಲ ಎಂದು ದಶಕದ ಹಿಂದೆ ಹೇಳುವ ಮೂಲಕ ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದ್ದ ಅವರ ಸಹಾಯಕ ರಾಗಿದ್ದ 96ರ ಹರೆಯದ ವೆಂಕಟ ಕಲ್ಯಾಣಂ ಅವರು, ಈ ಹಿಂದೆ ತನ್ನ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿತ್ತು ಎಂದು ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.
ಗಾಂಧೀಜಿಯವರು ಕೊನೆಯುಸಿರು ಬಿಡುವ ಮುನ್ನ ‘ಹೇ ರಾಮ್’ ಎಂದು ಉಚ್ಚರಿಸಿರಲಿಲ್ಲ ಎಂದು ತಾನೆಂದೂ ಹೇಳಿರಲಿಲ್ಲ. ಅವರು ‘ಹೇ ರಾಮ್’ ಎಂದು ಹೇಳಿದ್ದನ್ನು ತಾನು ಕೇಳಿರಲಿಲ್ಲ ಎಂದಷ್ಟೇ ತಾನು ಆಗ ಹೇಳಿದ್ದೆ ಎಂದು 1943-48ರ ಅವಧಿಯಲ್ಲಿ ರಾಷ್ಟ್ರಪಿತನ ಖಾಸಗಿ ಕಾರ್ಯದರ್ಶಿಯಾಗಿದ್ದ ಕಲ್ಯಾಣಂ ತಿಳಿಸಿದರು.
ಘಟನೆಯ ನಂತರದ ಗದ್ದಲದಿಂದಾಗಿ ತನಗೇನೂ ಕೇಳಿಸಿರಲಿಲ್ಲ ಎಂದು 1948, ಜ.30ರಂದು ನಡೆದಿದ್ದ ಗಾಂಧೀಜಿಯವರ ಹತ್ಯೆಯ ಪ್ರತ್ಯಕ್ಷದರ್ಶಿಯೆಂದು ಹೇಳಿಕೊಂಡಿರುವ ಅವರು ತಿಳಿಸಿದರು.
ಮಹಾತ್ಮರಿಗೆ ಗುಂಡಿಕ್ಕಿದಾಗ ಪ್ರತಿಯೊಬ್ಬರೂ ಬೊಬ್ಬೆ ಹೊಡೆಯುತ್ತಿದ್ದರು. ಆ ಗದ್ದಲದಲ್ಲಿ ತನಗೇನೂ ಕೇಳಲು ಸಾಧ್ಯವಾಗಿರಲಿಲ್ಲ. ಅವರು ‘ಹೇ ರಾಮ್’ ಎಂದು ಉಚ್ಚರಿಸಿರಬಹುದು ಎಂದರು.
ನಾಥೂರಾಂ ಗೋಡ್ಸೆಯ ಗುಂಡೇಟುಗಳಿಂದ ಕುಸಿದು ಬಿದ್ದಿದ್ದ ಗಾಂಧೀಜಿ ‘ಹೇ ರಾಮ್’ ಎಂದು ಹೇಳಿರಲಿಲ್ಲ ಎಂದು 2006ರಲ್ಲಿ ಕೇರಳದ ಕೊಲ್ಲಮ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಕಲ್ಯಾಣಂ ಇಡೀ ದೇಶವನ್ನು ದಂಗು ಬಡಿಸಿದ್ದರು. ಆಗ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿಯವರು ಈ ಹೇಳಿಕೆಯನ್ನು ಅಲ್ಲಗಳೆದಿದ್ದರು. ಗುಂಡೇಟು ತಿಂದ ಬಳಿಕ ಗಾಂಧೀಜಿಯವರು ಎರಡೂ ಕೈಗಳನ್ನು ಜೋಡಿಸಿ ‘ಹೇ ರಾಮ್’ ಎಂದು ಉಚ್ಚರಿಸಿದ್ದರು ಎಂದು ಕೊಲೆಯ ವಿಚಾರಣೆ ಸಂದರ್ಭ ಸರ್ದಾರ್ ಗುರುಬಚನ್ ಸಿಂಗ್ ಅವರ ಸಾಕ್ಷ್ಯವನ್ನು ಅವರು ಉಲ್ಲೇಖಿಸಿದ್ದರು.
ಗೋಡ್ಸೆ ಗಾಂಧೀಜಿಯವರನ್ನು ಒಂದೇ ಬಾರಿ ಕೊಂದಿದ್ದ. ಆದರೆ ರಾಜಕೀಯ ಪಕ್ಷಗಳು ಗಾಂಧೀಜಿವರ ಬೋಧನೆಗಳನ್ನು ಪಾಲಿಸದೆ ಅವರನ್ನು ಪ್ರತಿ ನಿತ್ಯ ಕೊಲ್ಲುತ್ತಿವೆ ಎಂದೂ ಕಲ್ಯಾಣಂ ಹೇಳಿದರು.