ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ?
ರಾಜಕೀಯದಲ್ಲಿ ಏನೂ ಆಗಬಹುದು

ಹೊಸದಿಲ್ಲಿ, ಜ.30: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆದುಕೊಂಡರೆ ರಾಷ್ಟ್ರಮಟ್ಟದಲ್ಲಿ ಶಿವಸೇನೆಯ ಜೊತೆ ಮೈತ್ರಿಯನ್ನು ಪಕ್ಷವು ಪರಿಗಣಿಸಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.
“ಶಿವಸೇನೆ ಮೊದಲು ಫಡ್ನವೀಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲಿ. ಬೆಂಬಲವನ್ನು ಹಿಂಪಡೆದಾಗ ಮಾತ್ರ ಈ ಬಗ್ಗೆ ಮಾತನಾಡಬಹುದು. ಕಾಂಗ್ರೆಸ್ ಪಕ್ಷವು ನಂತರವಷ್ಟೇ ಶಿವಸೇನೆಯೊಂದಿಗಿನ ಮೈತ್ರಿಯನ್ನು ಪರಿಗಣಿಸಬಹುದು” ಎಂದು ಮಾಜಿ ಮುಖ್ಯಮಂತ್ರಿ ಹಾಗು ರಾಹುಲ್ ಗಾಂಧಿಯವರ ನಿಕಟವರ್ತಿ ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು ಸ್ಪರ್ಧಿಸಲಾಗುವುದು ಎಂದು ಶಿವಸೇನೆ ಘೋಷಿಸಿದ ನಂತರ ಕಾಂಗ್ರೆಸ್ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಚೌಹಾಣ್ ಈ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಕ್ಷಣದಲ್ಲಾದರೂ ಫಡ್ನವೀಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲಾಗುವುದು ಎಂದು ಶಿವಸೇನೆಯ ನಾಯಕರು ಈಗಾಗಲೇ ಸುಳಿವು ನೀಡಿದ್ದಾರೆ.
ಆದರೆ ಎನ್ ಡಿಎ ಮೈತ್ರಿಕೂಟದೊಂದಿಗೆ ಇತರ ಪಕ್ಷಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಏನು ಬೇಕಾದರೂ ಮಾಡಬಹುದು. ಶಿವಸೇನೆಯ ಅಗತ್ಯ ಬಿಜೆಪಿಗಿದೆ ಎಂದು ಚೌಹಾಣ್ ಇದೇ ಸಂದರ್ಭ ಹೇಳಿದ್ದಾರೆ.