ಜ.31: ಸೂಪರ್ ಬ್ಲೂ ಬ್ಲಡ್ ಮೂನ್

ಹೊಸದಿಲ್ಲಿ, ಜ.30: ಆಕಾಶಕಾಯಗಳ ಬಗ್ಗೆ ಆಸಕ್ತಿಯುಳ್ಳವರಿಗೆ ಇಂದು ಸೂಪರ್ ಬ್ಲೂ ಬ್ಲಡ್ ಮೂನ್ ವೀಕ್ಷಿಸುವ ಅಪರೂಪದ ಅವಕಾಶ ಒದಗಿಬಂದಿದೆ. ನಾಸಾ ವಿಜ್ಞಾನಿಗಳ ಪ್ರಕಾರ, ಜನವರಿ 31 (ಇಂದು) ರಂದು ಸಂಭವಿಸಲಿರುವ ಹುಣ್ಣಿಮೆ ಮೂರು ಕಾರಣಗಳಿಂದ ವಿಶೇಷವಾಗಿರಲಿದೆ. ಇದು ಸೂಪರ್ ಮೂನ್‌ಗಳ ಸರಣಿಯಲ್ಲಿ ಮೂರನೇಯದ್ದಾಗಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯ ಅತ್ಯಂತ ಸಮೀಪಕ್ಕೆ ಆಗಮಿಸುತ್ತಾನೆ ಮತ್ತು ಸಾಮಾನ್ಯ ಹುಣ್ಣಿಮೆಯಂದು ಕಾಣುವುದಕ್ಕಿಂತ ಹದಿನಾಲ್ಕು ಪಟ್ಟು ಹೆಚ್ಚು ದೊಡ್ಡದಾಗಿ ಗೋಚರಿಸುತ್ತಾನೆ. ಈ ತಿಂಗಳಲ್ಲಿ ಸಂಭವಿಸುತ್ತಿರುವ ಎರಡನೇ ಹುಣ್ಣಿಮೆ ಇದಾಗಿದ್ದು, ಸಾಮಾನ್ಯವಾಗಿ ಈ ವಿದ್ಯಾಮಾನವನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಬ್ಲೂಮೂನ್ ಭೂಮಿಯ ನೆರಳಿನ ಮೂಲಕ ಹಾದು ಹೋಗುವ ಕಾರಣ ಚಂದ್ರಗ್ರಹಣ ಸಂಭವಿಸಲಿದೆ. ಈ ವೇಳೆ ಚಂದ್ರನು ಕೆಂಪಾಗಿ ಗೋಚರಿಸುವ ಕಾರಣ ಅದನ್ನು ಬ್ಲಡ್ ಮೂನ್ ಎಂದು ಕರೆಯಲಾಗಿದೆ. ಆಕಾಶಕಾಯ ವೀಕ್ಷಕರಿಗೆ ಸೂಪರ್ ಬ್ಲೂ ಬ್ಲಡ್ ಮೂನ್ ವೀಕ್ಷಣೆಗೆ ಸಹಕಾರಿಯಾಗುವಂತೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿರುವ ನೆಹರೂ ತಾರಾಲಯದಲ್ಲಿ ಗ್ರಹಣದಿಂದ ಚಂದ್ರನ ಉದಯ ಎಂಬ ಕಾರ್ಯಕ್ರಮವನ್ನು ಬುಧವಾರದಂದು ಸಂಜೆ 6.30ರಿಂದ ರಾತ್ರಿ 9 ಗಂಟೆಯವರೆಗೆ ಆಯೋಜಿಸಲಾಗಿದೆ.
ಖಗೋಳ ಶಿಕ್ಷಣ ಮತ್ತು ಖಗೋಳ ಪ್ರವಾಸೋದ್ಯಮ ಸೇವೆಯನ್ನ ಗಮನದಲ್ಲಿಟ್ಟು ಆರಂಭಿಸಲಾಗಿರುವ ಸ್ಟಾರ್ಟ್ ಅಪ್ ಸಂಸ್ಥೆ ಸ್ಪೇಸ್ ಇಂಡಿಯಾ, ಈ ಅಭೂತಪೂರ್ವ ವಿದ್ಯಾಮಾನವನ್ನು ವೀಕ್ಷಿಸಲು ಜನರಿಗೆ ಸಹಕಾರಿಯಾಗಲು ಇಂಡಿಯಾ ಗೇಟ್ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ಸಂಜೆ 6ರಿಂದ ರಾತ್ರಿ 9.30ರ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದೆ.
ಬುಧವಾರದಂದು ಚಂದ್ರಗ್ರಹಣದ ವೇಳೆ ಚಂದ್ರನು ಒಂದು ಗಂಟೆ ಹದಿನಾರು ನಿಮಿಷಗಳ ಕಾಲ ಸಂಪೂರ್ಣವಾಗಿ ಮರೆಯಾಗುತ್ತಾನೆ. ಭಾರತಾದ್ಯಂತ ಈ ಚಂದ್ರಗ್ರಹಣವು ಗೋಚರವಾದರೂ ಚಂದ್ರೋದಯದ ಜೊತೆಗೆಯೇ ಗ್ರಹಣವೂ ಆರಂಭವಾಗುವುದರಿಂದ ಈ ಸಮಯದಲ್ಲಿ ಕೇವಲ ಭಾಗಶಃ ಗ್ರಹಣವನ್ನು ವೀಕ್ಷಿಸಲು ಮಾತ್ರ ಸಾಧ್ಯವಾಗಲಿದೆ ಎಂದು ಸ್ಪೇಸ್ ಇಂಡಿಯಾ ತಿಳಿಸಿದೆ. ಈ ಚಂದ್ರಗ್ರಹಣದ ಮೂಲಕ ಅಪರೂಪದ ಚಂದ್ರೋದಯ ವೀಕ್ಷಣೆಗೆ ಅವಕಾಶ ಸಿಗುವ ಜೊತೆಗೆ ಚಂದ್ರನ ಮೇಲ್ಮೈಯು ತಕ್ಷಣ ತಣ್ಣಗಾದರೆ ಏನಾಗುತ್ತದೆ ಎಂಬುದನ್ನು ತಿಳಿಯಲು ಸಂಶೋಧಕರಿಗೆ ನೆರವಾಗಲಿದೆ ಎಂದು ಸ್ಪೇಸ್ ಇಂಡಿಯಾ ತಿಳಿಸಿದೆ.