ಬೀಗಮುದ್ರೆ ಅಭಿಯಾನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿರುವ ಆಪ್

ಹೊಸದಿಲ್ಲಿ, ಜ. 30: ಬೀಗ ಮುದ್ರೆ ಅಭಿಯಾನಕ್ಕೆ ತಾತ್ಕಾಲಿಕ ನಿಷೇಧ ಕೋರಿ ದಿಲ್ಲಿ ಸರಕಾರ ಈ ವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಸಭೆಯ ಮುನ್ನ ಹಾಗೂ ಅನಂತರ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಆಪ್ ಪಕ್ಷದ ಶಾಸಕರ ವಿರುದ್ಧ ದೂರು ದಾಖಲಿಸಿರುವುದು ಹಾಗೂ ದೆಹಲಿಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಭೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.
ಈ ವಿಷಯದ ಕುರಿತು ನಿನ್ನ ಸಂಜೆ ವಕೀಲರೊಂದಿಗೆ ಚರ್ಚಿಸಿದ್ದೇನೆ. ಬೀಗ ಮುದ್ರೆಗೆ ತಾತ್ಕಾಲಿಕ ತಡೆ ತರಲು ದಿಲ್ಲಿ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲಿದೆ ಎಂದು ಬಿಜೆಪಿ ನಾಯಕರೊಂದಿಗಿನ ಮಾತುಕತೆ ವಿಫಲವಾದ ಬಳಿಕ ಅವರು ಹೇಳಿದರು.
ಹರ್ಷವರ್ಧನ್ ಹೊರತುಪಡಿಸಿ ಬಿಜೆಪಿಯ ಎಲ್ಲ ಸಂಸದರು ಹಾಗೂ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಸೇರಿದಂತೆ ಮೂವರು ಶಾಸಕರೊಂದಿಗೆ ರಾಜ್ಯಸಭಾ ಸಂಸದ ವಿಜಯ್ ಗೋಯಲ್ ಕೇಜ್ರಿವಾಲ್ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಬೀಗ ಮುದ್ರೆ ಅಭಿಯಾನ ಕುರಿತಂತೆ ಚರ್ಚೆ ನಡೆಸಿದ್ದರು. ಕಾರ್ಪೊರೇಶನ್‌ಗಳ ಮೇಯರ್‌ಗಳು ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ನಿವಾಸದಿಂದ ಸಭೆ ತ್ಯಜಿಸಿ ಬಿಜೆಪಿ ನಾಯಕರು ಹೊರಬಂದ ಬಳಿಕ ಹಾಗೂ ಆಪ್‌ನ ಶಾಸಕರು ತಮ್ಮೊಂದಿಗೆ ದುರ್ವರ್ತನೆ ತೋರಿದರು ಎಂದು ಆರೋಪಿಸಿದ ಬಳಿಕ ಈ ಸಭೆ ವಿಫಲವಾಗಿತ್ತು ಎಂದು ದಕ್ಷಿಣ ದಿಲ್ಲಿ ಸಂಸದ ರಮೇಶ್ ಬಿಧುರಿ ತಿಳಿಸಿದ್ದಾರೆ.







