ಬಜೆಟ್ ಮಂಡಿಸುವಾಗ ವಿತ್ತ ಸಚಿವರು ಬ್ರೀಫ್ ಕೇಸ್ ಒಯ್ಯುವುದೇಕೆ?
ಇಲ್ಲಿದೆ ಮಾಹಿತಿ

ಹೊಸದಿಲ್ಲಿ, ಜ.30: ಪ್ರತಿ ವರ್ಷದ ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವರು ಬ್ರೀಫ್ ಕೇಸ್ ಒಯ್ಯುವುದನ್ನು ನೀವು ನೋಡಿರಬಹುದು. ಬ್ರೀಫ್ ಕೇಸ್ ನೊಳಗೆ ಏನಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಬಜೆಟ್ ಮಂಡಿಸಲು ಪಾರ್ಲಿಮೆಂಟ್ ಪ್ರವೇಶಿಸುವ ಮೊದಲು ಚಿದಂಬರಂ ಅವರಿಂದ ಹಿಡಿದು ಅರುಣ್ ಜೇಟ್ಲಿವರೆಗೆ ವಿತ್ತ ಸಚಿವರು ಈ ಬ್ರೀಫ್ ಕೇಸನ್ನು ಹಿಡಿದುದ್ದನ್ನು ನಾವು ನೋಡಿದ್ದೇವೆ.
1947ರಿಂದಲೇ ಈ ಬ್ರೀಫ್ ಕೇಸ್ ಸಂಸ್ಕೃತಿಯನ್ನು ಅನುಸರಿಸಲಾಗುತ್ತಿತ್ತು. ಹೌದು.. ವಸಾಹತುಶಾಹಿಯ ಪರಂಪರೆಯಿಂದಲೇ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಹಣಕಾಸು ಸಚಿವ ವಿಲಿಯಂ ಎವಾರ್ಟ್ ಗ್ಲಾಡ್ ಸ್ಟೋನ್ ರಿಗೆ ಬ್ರಿಟಿಷ್ ರಾಣಿ ಈ ಬ್ರೀಫ್ ಕೇಸನ್ನು ನೀಡಿದ್ದರು. 1860ರವರೆಗೆ ಬ್ರಿಟನ್ ನಲ್ಲೂ ಸಚಿವರುಗಳು ಈ ‘ಬಜೆಟ್ ಪೆಟ್ಟಿಗೆ’ಯನ್ನು ಬಳಸುತ್ತಿದ್ದರು.
ಭಾರತದಲ್ಲಿ ಇಂತಹ ಪದ್ಧತಿಯೇನು ಮೊದಲಿಗೆ ಇರಲಿಲ್ಲ. 1947ರಲ್ಲಿ ಸ್ವತಂತ್ರ ಭಾರತದ ಪ್ರಪ್ರಥಮ ಬಜೆಟ್ ಮಂಡಿಸಿದ ಆರ್.ಕೆ. ಶಣ್ಮುಖಂ ಚೆಟ್ಟಿ ಬಜೆಟ್ ಮಂಡನೆ ವೇಳೆ ಬ್ರೀಫ್ ಕೇಸನ್ನು ಒಯ್ದಿದ್ದರು. ಇದನ್ನೇ ಮುಂದುವರಿಸುವ ಸಲುವಾಗಿ ನಂತರದ ಹಣಕಾಸು ಸಚಿವರೂ ಚೆಟ್ಟಿಯವರಂತೆ ಬಜೆಟ್ ಮಂಡನೆ ವೇಳೆ ತಮ್ಮೊಂದಿಗೆ ಬ್ರೀಫ್ ಕೇಸನ್ನು ಒಯ್ಯುತ್ತಿದ್ದಾರೆ.