ಚೀನಾ ಜೊತೆಗಿನ ಉದ್ವಿಗ್ನತೆ ತಾರಕಕ್ಕೆ: ತೈವಾನ್‌ನಿಂದ ಯುದ್ಧ ತಾಲೀಮು

ಹುವಾಲೀನ್ (ತೈವಾನ್), ಜ. 30: ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ತೈವಾನ್ ಪಡೆಗಳು ಮಂಗಳವಾರ ಯುದ್ಧ ತಾಲೀಮು ನಡೆಸಿವೆ.
ತಾಲೀಮಿನ ಭಾಗವಾಗಿ, ಒಳಬರುವ ಕಾಲ್ಪನಿಕ ಯುದ್ಧ ನೌಕೆಗಳ ಮೇಲೆ ನಿಗಾ ಇಡಲು ಸೇನೆಯು ನಿಗಾ ವಿಮಾನಗಳನ್ನು ಕಳುಹಿಸಿದೆ ಹಾಗೂ ಪೂರ್ವದ ಹುವಾಲೀನ್ ಬಂದರಿನಲ್ಲಿ ‘ಶತ್ರು’ ಕಾಲಿಡುತ್ತಿದ್ದಂತೆಯೇ ಯುದ್ಧ ಟ್ಯಾಂಕ್‌ಗಳು ದಾಳಿ ನಡೆಸಿದವು.
ದಾಳಿ ಹೆಲಿಕಾಪ್ಟರ್‌ಗಳು ಎಚ್ಚರಿಕೆ ಬೆಳಕುಗಳನ್ನು ಪ್ರದರ್ಶಿಸಿದವು ಹಾಗೂ ಎಫ್-16 ಯುದ್ಧ ವಿಮಾನಗಳು ‘ಶತ್ರು’ವಿನ ವಿರುದ್ಧದ ಭೂ ಕಾಳಗಕ್ಕೆ ಬೆಂಬಲ ನೀಡುತ್ತಾ ಕಾಲ್ಪನಿಕ ದಾಳಿಗಳನ್ನು ನಡೆಸಿವು.
ಚೀನಾದ ಸಂಭಾವ್ಯ ದಾಳಿಯನ್ನು ಎದುರಿಸಲು ಈ ಯುದ್ಧಭ್ಯಾಸ ನಡೆಸಲಾಗಿದೆ ಎಂಬುದಾಗಿ ರಕ್ಷಣಾ ಸಚಿವಾಲಯವು ಹೇಳಿಲ್ಲವಾದರೂ, ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಬದ್ಧತೆಯನ್ನು ತೋರಿಸುವ ನಿಟ್ಟಿನಲ್ಲಿ ಈ ತಾಲೀಮು ನಡೆಸಲಾಗಿದೆ ಎಂದಿದೆ.
ತೈವಾನ್ ಜಲಸಂಧಿಯು ತೈವಾನನ್ನು ಚೀನಾದಿಂದ ಪ್ರತ್ಯೇಕಿಸುತ್ತದೆ.
ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಕಳೆದ ವಾರ ಚೀನಾದ ‘ಸೇನಾ ವಿಸ್ತರಣೆ’ ವಿರುದ್ಧ ಎಚ್ಚರಿಕೆ ನೀಡಿದ್ದರು. ಅವರು 2016 ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ತೈವಾನ್ ದ್ವೀಪದ ಸುತ್ತ ಚೀನಾದ ವಾಯು ಮತ್ತು ನೌಕಾ ಚಟುವಟಿಕೆಗಳಲ್ಲಿ ಏರಿಕೆಯಾಗಿರುವುದನ್ನು ಸ್ಮರಿಸಬಹುದಾಗಿದೆ.
ತೈವಾನ್ ಜಲಸಂಧಿಯಲ್ಲಿ ಚೀನಾದ ನಾಗರಿಕ ವಿಮಾನಗಳು ಅನುಸರಿಸುತ್ತಿರುವ ನೂತನ ವಾಯು ಮಾರ್ಗಗಳ ಬಗ್ಗೆಯೂ ವಿವಾದವಿದೆ.







