ಬೆಂಗಳೂರು: ಕಾಲೇಜುಗಳ ಮುಂಭಾಗ ‘ಮೋದಿ ಪಕೋಡಾ’ ಪ್ರತಿಭಟನೆ

ಬೆಂಗಳೂರು, ಜ.30: ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ವಿವಿಧ ಕಾಲೇಜುಗಳ ಬಳಿ ಮೋದಿ ಪಕೋಡಾ ತಯಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಎನ್‌ಎಸ್‌ಯುಐ ಕಾರ್ಯಕರ್ತರು, ನಗರದ ಆರ್.ಸಿ. ಕಾಲೇಜು, ಶೇಷಾದ್ರಿಪುರಂ, ಎಸ್‌ಜೆಪಿ ಸೇರಿ ನಾನಾ ಕಾಲೇಜುಗಳ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಬಾಣಸಿಗರ ವೇಶದಲ್ಲಿ ಪಕೋಡಾ ಹಿಡಿದಿರುವ ‘ಮೋದಿ ಪಕೋಡಾ ವ್ಯಾಪಾರ’ ಎಂದು ಬರೆಯಲಾದ ಫಲಕಗಳನ್ನು ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ವಾರ್ಷಿಕವಾಗಿ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ, ತಮ್ಮ ಭರವಸೆಯನ್ನು ಉಳಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಮುಖಂಡ ಶ್ರೀಧರ್ ಬುಡುಬುಡುಕೆ ವೇಷದ ಮೇಲೆ ಪದವಿ ಪಡೆದ ಉಡುಗೆಯಲ್ಲಿ ಪಕೋಡಾ ತಯಾರಿಸಿ ಸಾರ್ವಜನಿಕರಿಗೆ ಹಂಚಿದರು. ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮುಖಂಡ ಜಯೇಂದರ್ ಸೇರಿ ಪ್ರಮುಖರಿದ್ದರು.







