5 ವರ್ಷಗಳಿಂದ ಖಾಲಿ ಬಿದ್ದಿರುವ ಹುದ್ದೆಗಳನ್ನು ತೆಗೆದುಹಾಕಲು ಕೇಂದ್ರ ಸರಕಾರ ಚಿಂತನೆ

ಹೊಸದಿಲ್ಲಿ, ಜ.30: ಐದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಖಾಲಿ ಬಿದ್ದಿರುವ ಹುದ್ದೆಗಳನ್ನು ತೆಗೆದುಹಾಕಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು ಈ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ಒಪ್ಪಿಸುವಂತೆ ಎಲ್ಲಾ ಸಚಿವಾಲಯಗಳಿಗೆ ಸೂಚಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿತ್ತ ಸಚಿವಾಲಯ, ಸರಕಾರ ಈಗಾಗಲೆ ಎಲ್ಲಾ ಸಚಿವಾಲಯಗಳಿಗೆ ಈ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಿದೆ. ಕೆಲವು ಇಲಾಖೆಗಳು ಮತ್ತು ಸಚಿವಾಲಯಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕೆಲವೊಂದು ಇಲಾಖೆಗಳು ಕೇವಲ ಭಾಗಶಃ ವರದಿಯನ್ನು ಒಪ್ಪಿಸಿವೆ ಎಂದು ತಿಳಿಸಿದೆ.
ಹಾಗಾಗಿ ಎಲ್ಲಾ ಸಚಿವಾಲಯಗಳ ಮತ್ತು ಇಲಾಖೆಗಳ ಆರ್ಥಿಕ ಸಲಹೆಗಾರರು ಮತ್ತು ಜಂಟಿ ಕಾರ್ಯದರ್ಶಿಗಳು (ಆಡಳಿತ) ಈ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಐದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಖಾಲಿ ಬಿದ್ದಿರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಆಮೂಲಕ ಅಂಥ ಹುದ್ದೆಗಳನ್ನು ಶಾಶ್ವತವಾಗಿ ತೆಗೆದುಹಾಕಲು ಸಹಕಾರಿಯಾಗುತ್ತದೆ ಎಂದು ಜನವರಿ 16ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸರಕಾರವು ತಿಳಿಸಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಸಾವಿರಾರು ಹುದ್ದೆಗಳು ಐದು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಖಾಲಿ ಬಿದ್ದಿವೆ.