ತಾಲಿಬಾನನ್ನು ಯುದ್ಧಭೂಮಿಯಲ್ಲೇ ಸೋಲಿಸಲು ಅಮೆರಿಕಕ್ಕೆ ಅಫ್ಘಾನ್ ಒತ್ತಾಯ

ಕಾಬೂಲ್, ಜ. 30: ನಿರಂತರ ಮಾರಕ ದಾಳಿಗಳನ್ನು ನಡೆಸುತ್ತಿರುವ ತಾಲಿಬಾನ್ ಜೊತೆ ಮಾತುಕತೆ ನಡೆಸುವ ಸಾಧ್ಯತೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ ಬೆನ್ನಿಗೇ, ಈ ಭಯೋತ್ಪಾದಕ ಗುಂಪನ್ನು ಯುದ್ಧಭೂಮಿಯಲ್ಲಿ ಸೋಲಿಸಬೇಕಾಗಿದೆ ಎಂದು ಅಫ್ಘಾನಿಸ್ತಾನ ಮಂಗಳವಾರ ಹೇಳಿದೆ.
ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕಾಬೂಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಹತ್ಯಾಕಾಂಡಕ್ಕಾಗಿ ತಾಲಿಬಾನನ್ನು ಖಂಡಿಸಿದ್ದಾರೆ. ಅದರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಈಗ ಸಿದ್ಧವಿಲ್ಲ ಎಂದಿದ್ದಾರೆ.
‘‘ನಾವು ಏನನ್ನು ಮುಗಿಸಬೇಕಾಗಿದೆಯೋ ಅದನ್ನು ಮುಗಿಸುತ್ತೇವೆ’’ ಎಂದು ಅವರು ಹೇಳಿದರು.
ಈ ನಡುವೆ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿಯ ವಕ್ತಾರರೊಬ್ಬರು ಮಾತನಾಡುತ್ತಾ, ‘‘ತಾಲಿಬಾನ್ ಮಿತಿಯನ್ನು ದಾಟಿದೆ ಹಾಗೂ ಶಾಂತಿಯನ್ನು ಹೊಂದುವ ಅವಕಾಶವೊಂದನ್ನು ಕಳೆದುಕೊಂಡಿದೆ’’ ಎಂದು ಹೇಳಿದರು.
‘‘ನಾವು ಯುದ್ಧ ಭೂಮಿಯಲ್ಲೇ ಶಾಂತಿಯನ್ನು ಕಾಣಬೇಕಾಗಿದೆ. ಅವರನ್ನು ನಿರ್ಮೂಲಗೊಳಿಸಬೇಕಾಗಿದೆ’’ ಎಂದರು.
Next Story





