ಕೋಮುವಾದ ಹೆಚ್ಚಾಗಲು ಬಿಡುವುದಿಲ್ಲ: ಸುನಂದ ಜಯರಾಂ
ಸೌಹಾರ್ದತೆಗಾಗಿ ಮಾನವ ಸರಪಳಿಗೆ

ಮದ್ದೂರು, ಜ.30: ಮಹಾತ್ಮಗಾಂಧೀಜಿ ಹುತಾತ್ಮ ದಿನವಾದ ಮಂಗಳವಾರ ಕೋಮು ಸೌಹಾರ್ದತೆಗಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣದ ಟಿಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಮಾನವ ಸರಪಳಿಯನ್ನು ನಿರ್ಮಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೈತನಾಯಕಿ ಸುನಂದ ಜಯರಾಂ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಕೋಮು ಸೌಹಾರ್ದತೆ ಕದಡಿದೆ. ಜಾತಿ ಜಾತಿಗಳ ನಡುವೆ ಸಂಘರ್ಷ ಹೆಚ್ಚಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೋಮುವಾದವನ್ನು ಹೆಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯಾರು ಕೂಡ ಇದರ ಬಗ್ಗೆ ನಮಗೆ ನೀತಿ ಹೇಳಬೇಕಾದ ಅಗತ್ಯವಿಲ್ಲ. ಹಾಗಾಗಿ ರಾಜ್ಯಾದ್ಯಂತ ಶಾಂತಿ, ಸ್ನೇಹ, ಸೌಹಾರ್ದತೆ ಸಹಬಾಳ್ವೆಗೆ ಬದ್ಧರಾಗಿ ಕೋಮುಸಾಮರಸ್ಯವನ್ನು ಕಾಪಾಡಲು ಈ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಪ್ರತಿಜ್ಞಾವಿಧಿಯನ್ನು ಎಚ್.ಕೆ.ವೀರಣ್ಣಗೌಡ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಕೆ.ಟಿ.ಚಂದು ಬೋಧಿಸಿದರು. ಸಾಹಿತಿ ಶೌಕತ್ ಆಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ, ಟಿ.ಯಶವಂತ್, ಯದುಶೈಲ ಸಂಪತ್, ಪ್ರೊ.ಶ್ರೀಲತಾ, ಪ್ರಿಯಾಂಕ ಅಪ್ಪುಗೌಡ, ಹುರುಗಲವಾಡಿ ರಾಮಯ್ಯ, ಸಿದ್ದೇಗೌಡ, ಸೋಂಪುರ ಲಿಂಗೇಗೌಡ, ಹನುಮೇಶ್, ಅಂದಾನಿ ಸೋಮನಹಳ್ಳಿ, ಅಂಬರೀಶ್ ಸೇರಿದಂತೆ ಇತರ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.







