ನಾಗಾಲ್ಯಾಂಡ್: ಆಡಳಿತ ಪಕ್ಷದ ಹತ್ತು ಶಾಸಕರ ರಾಜೀನಾಮೆ

ಕೊಹಿಮಾ,ಜ.30: ಫೆ.27ರ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ನಾಗರಿಕ ಸಂಘಟನೆಗಳ ಆಗ್ರಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ ಆಡಳಿತ ಪಕ್ಷ ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್)ನ ಹತ್ತು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುದೀರ್ಘ ಕಾಲದಿಂದ ಬಾಕಿಯಿರುವ ನಾಗಾ ರಾಜಕೀಯ ಸಮಸ್ಯೆಗೆ ಚುನಾವಣೆಗೆ ಮುನ್ನ ಪರಿಹಾರ ಕ್ಕಾಗಿ ಜನತೆಯ ಕರೆಗೆ ಸ್ಪಂದಿಸಿ ನಾವು ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ರಾಜ್ಯದ ಮಾಜಿ ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ತೊಖೆಹೊ ಯೆಪ್ತೋಮಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆಗೆ ಮುನ್ನ ನಾಗಾ ರಾಜಕೀಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಿ ರಾಜ್ಯ ವಿಧಾನಸಭೆಯು ಕಳೆದ ತಿಂಗಳು ನಿರ್ಣಯವನ್ನು ಅಂಗೀಕರಿಸಿತ್ತು. 10 ಶಾಸಕರ ರಾಜೀನಾಮೆಯಿಂದಾಗಿ 60 ಸದಸ್ಯಬಲದ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ಈಗ 46ಕ್ಕಿಳಿದಿದೆ.
Next Story





