ಮಡಿಕೇರಿ: ಪಂದ್ಯಂಡ ಬೆಳ್ಯಪ್ಪ ಸ್ಮರಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ

ಮಡಿಕೇರಿ,ಜ.30 : ಕೊಡವ ಸಾಹಿತ್ಯ ಅಕಾಡೆಮಿ ಸಾಹಿತ್ಯ, ಸಂಸ್ಕೃತಿ ಪರವಾದ ಸಾಕಷ್ಟು ಉತ್ತಮ ಕಾರ್ಯಕ್ರಮ ಆಯೋಜಿಸಬೇಕಿದೆ. ಅದಕ್ಕೆ ಅನುದಾನದ ತೊಂದರೆ ಆಗದಂತೆ ಜನಪ್ರತಿನಿಧಿಗಳು ನೋಡಿಕೊಳ್ಳುತ್ತೇವೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಪಂದ್ಯಂಡ ಬೆಳ್ಯಪ್ಪ ಸ್ಮರಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪ ಅವರ ಆದರ್ಶಗಳನ್ನು ಯುವ ಜನತೆ ಮಾದರಿಯಾಗಿಸಿಕೊಂಡು ಪಾಲಿಸಬೇಕು. ಇಂತವರ ಸೇವೆ, ಸಾಧನೆಯನ್ನು ಇಂದಿನ ಪೀಳಿಗೆಗೆ ತಿಳಿಸಿ ಹೇಳುವ ಕಾರ್ಯ ಮಾಡಬೇಕಿದೆ. ಬೆಳ್ಯಪ್ಪ ಅವರಂತೆ ಸಾಕಷ್ಟು ಮಂದಿ ಸಾಧಕರು, ನಿಸ್ವಾರ್ಥ ಸೇವಕರು ನಮ್ಮಲ್ಲಿ ಇದ್ದು, ಅವರ ಕುರಿತು ದಾಖಲೀಕರಣ ಆಗಬೇಕಾದ ಅವಶ್ಯವಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡಗಿನಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕಿದ ಹಾಗೂ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸಿದ ಕೊಡಗು ಪತ್ರಿಕೆಯ ಕಚೇರಿಯಾಗಿದ್ದ ಕೊಡಗು ಪ್ರೆಸ್ ಕಟ್ಟಡವನ್ನು ಸ್ಮಾರಕವಾಗಿ ಪರಿವರ್ತಿಸಬೇಕು ಎಂದರು.
ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಜನವಲಯದಲ್ಲಿ ಹರಡಲು ಕೊಡಗು ಪತ್ರಿಕೆ ಹಾಗೂ ಅದರ ಸಂಪಾದಕರಾಗಿದ್ದ ಪಂದ್ಯಂಡ ಬೆಳ್ಯಪ್ಪ ಕಾರಣ ಎಂದರು.
ಸಾಹಿತಿ ಬಿ.ಎ. ಷಂಶುದ್ದೀನ್ ಮಾತನಾಡಿ, ಜಿಲ್ಲಾಡಳಿತ ಪ್ರತಿ ವರ್ಷ ಪಂದ್ಯಂಡ ಬೆಳ್ಯಪ್ಪ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಾಲೆಗಳಲ್ಲಿ ಬೆಳ್ಯಪ್ಪ ಅವರ ಸಾಧನೆ ಶಾಲಾ ಪಠ್ಯವಾಗಬೇಕು. ಈ ದಿಕ್ಕಿನಲ್ಲಿ ಎಲ್ಲರೂ ಒಂದಾಗಿ ಪ್ರಯತ್ನ ನಡೆಸಬೇಕಿದೆ. ಬೆಳ್ಯಪ್ಪ ಜನಾಂಗ, ಜಾತಿಯ ಚೌಕಟ್ಟನ್ನು ಮೀರಿ ನಿಂತವರು ಎಂದು ಹೇಳಿದರು.
ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ, ಸಹಕಾರಿ ಯೂನಿಯನ್ನ ಪದಾಧಿಕಾರಿಗಳು, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರು ಇದ್ದರು.







